ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ. 29 : ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಹನುಮಾನ್ ಧ್ವಜ ಇಳಿಸಿ ಸಮಸ್ತ ಹಿಂದೂಗಳಿಗೆ ಅವಮಾನ ಮಾಡಿದರುವುದನ್ನು ವಿರೋಧಿಸಿ ಭಾರತೀಯ ಜನತಾ ಪಾರ್ಟಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಚಾಲಕ ಎಸ್.ಲಿಂಗಮೂರ್ತಿ ಪೊಲೀಸರ ಬಲದಿಂದ ಕಾಂಗ್ರೆಸ್ ಸರ್ಕಾರ ಕೆರಗೋಡಿನಲ್ಲಿ ಹನುಮ ಧ್ವಜವನ್ನು ಇಳಿಸಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇರ ಹೊಣೆಗಾರರು. ಧರ್ಮವನ್ನು ಬಿಟ್ಟು ಯಾರು ಬದುಕಲು ಸಾಧ್ಯವಿಲ್ಲ. ರಾಮ, ಆಂಜನೇಯ ಇಲ್ಲದ ಊರುಗಳೆ ಇಲ್ಲ. ದೇಶದ ಪ್ರಧಾನಿ ನರೇಂದ್ರಮೋದಿರವರು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಗಾಟಿಸಿ ಇಡಿ ಪ್ರಪಂಚ ಭಾರತದತ್ತ ನೋಡುವಂತೆ ಮಾಡಿದ್ದಾರೆ. ಇಂತಹ ಘಟನೆ ಇನ್ನೆಲ್ಲಿಯೂ ನಡೆಬಾರದು. ಭಾನುವಾರ ಚಿತ್ರದುರ್ಗದಲ್ಲಿ ಶೋಷಿತ ಸಮುದಾಯಗಳ ಜನಜಾಗೃತಿ ನಡೆಸಿರುವುದು ಚುನಾವಣೆ ಗಿಮಿಕ್ ಎಂದು ವ್ಯಂಗ್ಯವಾಡಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಹನುಮನ ಧ್ವಜ ಇಳಿಸಿ ಅಶಾಂತಿಯನ್ನುಂಟು ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿ ನಿರ್ಮಾಣ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದೂಗಳ ಮೇಲೆ ದೌರ್ಜನ್ಯವೆಸಗುತ್ತಿದೆ. ಕೆರಗೋಡಿನಲ್ಲಿ ಗ್ರಾಮ ಪಂಚಾಯಿತಿ ಅನುಮೋದನೆ ಪಡೆದು ಹನುಮ ಧ್ವಜವನ್ನು ನಿರ್ಮಿಸಲಾಗಿತ್ತು. ಪೊಲೀಸರ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ಕಾಂಗ್ರೆಸ್ ಹನುಮ ಧ್ವಜವನ್ನು ಇಳಿಸಿದೆ. ಹಳೆ ಕೇಸನ್ನು ಕೆದಕಿ ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಲಾಗಿತ್ತು. ಈಗಿನ ವಿರೋಧ ಪಕ್ಷದ ನಾಯಕ ಆರ್.ಅಶೋಕ್‍ರವರನ್ನು ಒಂಬತ್ತು ತಿಂಗಳಲ್ಲಿ ಮೂರು ಬಾರಿ ಬಂಧಿಸಲಾಗಿತ್ತು. ನಿಮ್ಮ ದೌರ್ಜನ್ಯಕ್ಕೆ ಹಿಂದೂ ಸಮಾಜ ಜಗ್ಗಲ್ಲ. ಪೊಲೀಸರೆ ಕೆರಗೋಡಿನಲ್ಲಿ ಹನುಮಾನ್ ಧ್ವಜವನ್ನು ಮತ್ತೆ ಪುನರ್ ಪ್ರತಿಷ್ಟಾಪಿಸಬೇಕು. ಇಲ್ಲವಾದರೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಡಾ.ಸಿದ್ದಾರ್ಥ, ಎನ್.ಆರ್.ಲಕ್ಷ್ಮಿಕಾಂತ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ, ಸೂರನಹಳ್ಳಿ ವಿಜಯಣ್ಣ, ನಗರಾಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ, ನರೇಂದ್ರ ಹೊನ್ನಾಳ್, ನಾಗರಾಜ್‍ಬೇದ್ರೆ, ರಾಮರೆಡ್ಡಿ, ಡಾ.ಮಂಜುನಾಥ್, ಶೈಲೇಶ್, ಪಾಲಯ್ಯ, ವೆಂಕಟೇಶ್‍ಯಾದವ್, ಮಲ್ಲಿಕಾರ್ಜುನ್, ಶ್ಯಾಮಲ ಶಿವಪ್ರಕಾಶ್, ಶೈಲಜಾರೆಡ್ಡಿ, ಮಂಜುಳಮ್ಮ, ಕವನ, ಬಸಮ್ಮ, ದಗ್ಗೆಶಿವಪ್ರಕಾಶ್, ಕಾಂಚನ, ಶಂಭು, ತಿಪ್ಪೇಸ್ವಾಮಿ, ರೂಪ ಸುರೇಶ್, ತಿಪ್ಪೇಸ್ವಾಮಿ, ಸಂಪತ್ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಚಿತ್ರದುರ್ಗ : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಚಾಲಕರಾಗಿ ನೇಮಕಗೊಂಡಿರುವ ಎಸ್.ಲಿಂಗಮೂರ್ತಿ ಸೋಮವಾರ ಬಿಜೆಪಿ. ಪಕ್ಷದ ಕಚೇರಿಗೆ ಭೇಟಿ ನೀಡಿದಾಗ ಜಿಲ್ಲಾಧ್ಯಕ್ಷ ಎ.ಮುರಳಿ ಶಾಲು ಹೊದಿಸಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್.ಲಿಂಗಮೂರ್ತಿ ಸದ್ಯದಲ್ಲೆ ಎದುರಾಗಲಿರುವ ಪಾರ್ಲಿಮೆಂಟ್ ಚುನಾವಣೆಗೆ ಪಕ್ಷದ ಕಾರ್ಯಕರ್ತರು ಈಗಿನಿಂದಲೆ ತಯಾರಾಗಿ ಪ್ರತಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕು. ದೇಶದಲ್ಲಿ ಬಿಜೆಪಿ. ವಾತಾವರಣವಿರುವುದರಿಂದ ಪ್ರಧಾನಿ ಮೋದಿರವರು ನೀಡಿರುವ ಮಹಾತ್ವಾಕಾಂಕ್ಷಿ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸುವಂತೆ ಸೂಚಿಸಿದರು.
ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಉದ್ಗಾಟಿಸಿರುವ ಪ್ರಧಾನಿ ಮೋದಿ ಹಿಂದೂಗಳ ಐದು ನೂರು ವರ್ಷಗಳ ಕನಸನ್ನು ನನಸು ಮಾಡಿ ಇಡಿ ಪ್ರಪಂಚವೆ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಹಾಗಾಗಿ 2024 ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರಮೋದಿ ಮತ್ತೆ ಪ್ರಧಾನಿಯಾಗಬೇಕಾಗಿರುವುದರಿಂದ ಕಾರ್ಯಕರ್ತರು ಪಕ್ಷದ ಗೆಲುವಿಗೆ ಟೊಂಕ ಕಟ್ಟಿ ನಿಲ್ಲಬೇಕು ಎಂದು ತಾಕೀತು ಮಾಡಿದರು.
ಡಾ.ಸಿದ್ದಾರ್ಥ ಗುಂಡಾರ್ಪಿ, ನರೇಂದ್ರ ಹೊನ್ನಾಳ್, ಶಿವಣ್ಣ, ಸುರೇಶ್‍ಸಿದ್ದಾಪುರ, ಜಿಲ್ಲೆಯ ಎಲ್ಲಾ ಮಂಡಲ ಅಧ್ಯಕ್ಷರು, ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.