ಚಿತ್ರದುರ್ಗ : ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಜನಪರ ಯೋಜನೆಗಳನ್ನು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮನೆ ಮನೆಗೆ ಮುಟ್ಟಿಸುವ ಉದ್ದೇಶದಿಂದ ಜೂ.18 ರಂದು ಮುರುಘಾಮಠದ ಅನುಭವ ಮಂಟಪದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವವರ ಸಮಾವೇಶಕ್ಕೆ ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಗಮಿಸಲಿದ್ದಾರೆಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಮುರುಘಾಮಠದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವರು ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿರುವ ನಮ್ಮ ಪಕ್ಷದ ಬೆಂಬಲಿತ ಸದಸ್ಯರುಗಳ ಸಮಾವೇಶ ಉದ್ದೇಶಿಸಿ ಜೆ.ಪಿ.ನಡ್ಡಾರವರು ಅಂದು ಸಂಜೆ ನಾಲ್ಕು ಗಂಟೆಗೆ ಭಾಷಣ ಮಾಡಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ, ಸಂಸದರು, ಸಚಿವರು, ಶಾಸಕರು ಸೇರಿದಂತೆ ಅನೇಕ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಇದೊಂದು ಐತಿಹಾಸಿಕ ಸಮಾವೇಶವಾಗಲಿದ್ದು, ಜನವಿರೋಧಿ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತೊಗೆಯುವಂತೆ ಜನತೆಯಲ್ಲಿ ಜಾಗೃತಿ ಮೂಡಿಸಲಾಗುವುದೆಂದು ಹೇಳಿದರು.
ಹತ್ತು ಸಾವಿರ ಮಂದಿಯನ್ನು ಸಮಾವೇಶದಲ್ಲಿ ಸೇರಿಸುವ ಉದ್ದೇಶವಿದ್ದು, ಬೆಳಗಾಂ, ಹುಬ್ಬಳ್ಳಿ, ಧಾರವಾಡ, ಬೀದರ್, ಕಲ್ಬುರ್ಗಿ, ಕೊಪ್ಪಳ, ಶಿವಮೊಗ್ಗ, ಮಂಡ್ಯ ಹಾಗೂ ಕರಾವಳಿ ಪ್ರದೇಶಗಳಿಂದ ಸಮಾವೇಶಕ್ಕೆ ಆಗಮಿಸಲಿದ್ದು, ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವುದಾಗಿ ತಿಳಿಸಿದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ಬಿಜೆಪಿ.ರಾಷ್ಟಿಯಯ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರಥಮ ಪ್ರಥಮ ಬಾರಿಗೆ ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದು, ಬಯಲುಸೀಮೆ ಚಿತ್ರದುರ್ಗ ಜಿಲ್ಲೆಗೆ ಬೇಕಾಗಿರುವ ಪ್ರಮುಖ ಯೋಜನೆಗಳಾದ ಭದ್ರಾಮೇಲ್ದಂಡೆ ಹಾಗೂ ತುಮಕೂರು ಚಿತ್ರದುರ್ಗ ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ವಿಳಂಭವಾಗುತ್ತಿರುವುದನ್ನು ನಡ್ಡಾರವರಿಗೆ ತಿಳಿಸುವ ಮೂಲಕ ಪ್ರಧಾನಿ ಮೋದಿರವರ ಗಮನ ಸೆಳೆಯಲಾಗುವುದೆಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡುತ್ತ ಸ್ಥಳೀಯ ಸಂಸ್ಥೆಗಳಿಂದ ಗೆದ್ದಿರುವ ನಮ್ಮ ಪಕ್ಷದ ಬೆಂಬಲಿತ ಜನಪ್ರತಿನಿಧಿಗಳ ಸಮಾವೇಶದ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಂಕ್ಷಿ ಯೋಜನೆಗಳನ್ನು ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವುದು ಸಮಾವೇಶದ ಉದ್ದೇಶ. ಸಮಾವೇಶಕ್ಕೆ ರಾಜ್ಯದ ನಾಲ್ಕು ದಿಕ್ಕುಗಳಿಂದ ಆಗಮಿಸುವವರನ್ನು ಸತ್ಕರಿಸುವುದಕ್ಕಾಗಿ 35 ವಿಭಾಗಗಳನ್ನು ರಚಿಸಲಾಗಿದೆ ಎಂದರು.
ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೈಪಾಲ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್‌ಸಿದ್ದಾಪುರ, ಡಾ.ಸಿದ್ದಾರ್ಥ, ಅನಿತ್, ಪಾಪೇಶ್‌ನಾಯಕ, ಸಿಂಧು, ನವೀನ್ ಚಾಲುಕ್ಯ, ತುಮಕೂರು ಜಿಲ್ಲಾ ಬಿಜೆಪಿ.ಅಧ್ಯಕ್ಷ ರವಿ, ಮಧುಗಿರಿ ಜಿಲ್ಲಾ ಬಿಜೆಪಿ.ಅಧ್ಯಕ್ಷ ಬಿ.ಕೆ.ಮಂಜುನಾಥ್, ವಕ್ತಾರ ನಾಗರಾಜ್‌ಬೇದ್ರೆ, ಜಿಲ್ಲಾ ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.