ಬೆಂಗಳೂರು: ಬಿಜೆಪಿ ಶಾಸಕ ಭೈರತಿ ಬಸವರಾಜ್ ಬಂಧನ ಭೀತಿಯಿಂದ ಇದ್ದಾರೆ. ರೌಡಿಶೀಟರ್ ಬಿಕ್ಲು ಶಿವನ ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಹೀಗಾಗಿಯೇ ಹೈಕೋರ್ಟ್ ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು. ಇದೀಗ ಆ ಅರ್ಜಿ ವಜಾಗೊಂಡಿದೆ. ಈ ಮೂಲಕ ಸಿಐಡಿ ಪೊಲೀಸರಿಗೆ ಭೈರತಿ ಬಸವರಾಜು ಬಂಧಿಸುವ ಹಾದಿ ಸುಗಮವಾಗಿದೆ. ಈ ಹಿಂದೆ ಕೆಳ ನ್ಯಾಯಾಲಯದಲ್ಲಿ ಭೈರತಿ ಬಸವರಾಜು ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿತ್ತು.
ಹೈಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆ ಭೈರತಿ ಬಸವರಾಜ್ ನಾಪತ್ತೆಯಾಗಿದ್ದಾರೆ. ಮೊಬೈಲ್ ಸಿಚ್ಡ್ ಆಫ್ ಮಾಡಿಕೊಂಡಿದ್ದಾರೆ. ಬಿಕ್ಲು ಶಿವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ. ಹೀಗಾಗಿ ಶಾಸಕ ಭೈರತಿ ಬಸವರಾಜುರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು. ಆಗ ಸತ್ಯ ಹೊರಗೆ ಬರಲಿದೆ ಎಂದು ಸಿಐಡಿ ಪರ ವಕೀಲರು ಹೈಕೋರ್ಟ್ ನಲ್ಲಿ ವಾದಿಸಿದ್ದರು.
ಅವರಿಗೆ ನಿರೀಕ್ಷಣಾ ಜಾಮೀನು ಸಿಗಬಾರದೆಂದು ಸಿಐಡಿ ಪರ ವಕೀಲರು ವಾದ ಮಂಡನೆ ಮಾಡಿದ್ದರು. ಇತ್ತ ಬಿಕ್ಲು ಶಿವಮ ತಾಯಿ ಕೂಡ ಕೇವಲ 24 ಗಂಟೆಯಲ್ಲಿಯೇ ತಮ್ಮ ಹೇಳಿಕೆಯನ್ನ ಬದಲಾಯಿಸಿದ್ದಾರೆ. ಪೊಲೀಸರಿಗೆ ಕೊಟ್ಟ ದೂರುಗಳಲ್ಲಿ ಕೆಲ ವ್ಯತ್ಯಾಸಗಳು ಇದಾವೆ. ಹೀಗಾಗಿ ಭೈರತಿ ಬಸವರಾಜು ಅವರನ್ನು ಬಂಧಿಸಲು ಅವಕಾಶ ಕೊಡಬೇಕು. ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದೆಂದು ವಾದ ಮಂಡಿಸಿದ್ದರು. ಈ ಕೊಲೆ ಕೇಸಲ್ಲಿ ಕೋಕಾ ಕಾಯ್ದೆಯಡಿ ಕೇಸ್ ದಾಖಲಿಸಿ, ತನಿಖೆ ನಡೆಸುತ್ತಿರುವುದಾಗಿ ಸಿಐಡಿ ಪರ ವಕೀಲರು ಹೈಕೋರ್ಟ್ ಗೆ ತಿಳಿಸಿದ್ದರು. ಇದೀಗ ಜಾಮೀನು ಅರ್ಜಿ ವಜಾಗೊಂಡಿದ್ದು, ಬಂಧಿಸುವ ಸಾಧ್ಯತೆ ಹೆಚ್ಚಾಗಿದೆ.

