ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಲೇ ಪಕ್ಷಾಂತರ ಪರ್ವ ಶುರುವಾಗುತ್ತಿದೆ. ಆ ಪಕ್ಷದವರು ಈ ಪಕ್ಷಕ್ಕೆ ಈ ಪಕ್ಷದವರು ಆ ಪಕ್ಷಕ್ಕೆ ಹೋಗುವುದು ಸಾಮಾನ್ಯ. ಜೊತೆಗೆ ಪಕ್ಷದಿಂದಾಚೆಗೆ ಭೇಟಿಗಳು ನಡೆಯುತ್ತಿರುತ್ತೆ. ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಭೇಟಿಯಾಗಿದ್ದಾರೆ. ಈ ಭೇಟಿ ಬಳಿಕ ಸಾಕಷ್ಟು ಚರ್ಚೆಗಳು ಶುರುವಾಗಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ರಹಸ್ಯದ ಮಾತುಕತೆ ಕುತೂಹಲ ಕೆರಳಿಸಿದೆ. ಅರವಿಂದ್ ಬೆಲ್ಲದ್ ಹುಬ್ಬಳ್ಳಿ ಮತ್ತು ಧಾರವಾಡದ ಭಾಗದ ನಾಯಕ. ಈಗ ಡಿಕೆ ಶಿವಕುಮಾರ್ ಜೊತೆಗೆ ಭೇಟಿ ಮಾಡಿ, ಹುಬ್ಬಳ್ಳಿ – ಧಾರಾವಾಡದ ರಾಜಕೀಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ನಿಂದ ಆ ಭಾಗದಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿದರೆ ತನಗೆ ತೊಂದರೆಯಾಗುತ್ತೆ ಎಂದು ಅರವಿಂದ್ ಬೆಲ್ಲದ್ ತಿಳಿಸಿದ್ದಾರಂತೆ. ಯಾಕಂದ್ರೆ ಕಾಂಗ್ರೆಸ್ ನಿಂದ ಮೋಹನ್ ಲಿಂಬಿಕಾಯಿ ಅವರನ್ನು ಕಣಕ್ಕಿಳಿಸುವ ಪ್ಲ್ಯಾನ್ ನಡೆದಿದೆ ಎನ್ನಲಾಗಿದೆ.
ಮೋಹನ್ ಲಿಂಬಿಕಾಯಿ ಇತ್ತಿಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಹುಬ್ಬಳ್ಳಿ – ಧಾರವಾಡ ಭಾಗದಲ್ಲು ಬಿಜೆಪಿ ಸೋಲಿಸುವ ಪಣ ತೊಟ್ಟಿರುವ ಕಾಂಗ್ರೆಸ್ ಮೋಹನ್ ಅವರನ್ನೇ ನಿಲ್ಲಿಸಲು ಯೋಜನೆ ರೂಪಿಸಿದೆ. ಮೋಹನ್ ಅವರು ಸ್ಪರ್ಧ ಮಾಡಿದರೆ, ಅರವಿಂದ್ ಬೆಲ್ಲದ್ ಗೆಲುವು ಕಷ್ಟವಾಗುತ್ತದೆ. ಹೀಗಾಗಿ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಬೆಲ್ಲದ್, ಡಿಕೆಶಿ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.