ಬೆಂಗಳೂರು: ಆರ್ ಆರ್ ನಗರ ಶಾಸಕ ಮುನಿರತ್ನ ಮಾಡಿಕೊಂಡಿದ್ದ ಪ್ಲ್ಯಾನ್ ಕೇಳಿ ರಾಜ್ಯವೇ ಬೆಚ್ಚಿ ಬಿದ್ದಿದೆ. ಏಡ್ಸ್ ತಡೆಗಾಗಿ ಎಲ್ಲಾ ರಾಜ್ಯಗಳ ಸರ್ಕಾರ ಹೋರಾಟನಡೆಸುತ್ತಿದ್ದರೆ, ಇಲ್ಲಿ ಮುನಿರತ್ನ ಅವರೇ ಏಡ್ಸ್ ಸೋಂಕು ಹತ್ತಿಸುವ ಹುನ್ನಾರ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಅದರಲ್ಲೂ ತಮ್ಮದೇ ಪಕ್ಷದವರಿಗೆ ಎಂಬುದು ಆಶ್ಚರ್ಯಕರ ಸಂಗತಿ, ಆತಂಕಕಾರಿ ವಿಚಾರ.
ಆರ್.ಅಶೋಕ್ ಅವರಿಗೇನೆ ಇದು ದಿಗಿಲು ಬಡಿಸಿದೆ. ಎಂಥವರಿಗೆ ಆಗಲಿ ಏಡ್ಸ್ ಸೋಂಕಿತರ ರಕ್ತ ಇಂಜೆಕ್ಟ್ ಮಾಡಲು ಹೊರಟಿದ್ದರು ಎಂದರೆ ಭಯ ಆಗಲ್ವಾ. ಅಶೋಕ್ ಅವರಿಗೆ ಈ ವಿಚಾರ ತಿಳಿಯುತ್ತಿದ್ದ, ಮುನಿರತ್ನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಸರ್ಕಾರ ಇದರ ಸತ್ಯಾಸತ್ಯತೆಯನ್ನು ಹೊರ ತರಬೇಕೆಂದು ಮನವಿ ಮಾಡಿದ್ದಾರೆ. ಇದರ ನಡುವೆ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.
ಮುನಿರತ್ನರ ದ್ವೇಷದ ರಾಜಕೀಯಕ್ಕೆ, ಭ್ರಷ್ಟಾಚಾರಕ್ಕೆ ಗುರಿಯಾದವರಲ್ಲಿ ಬಿಜೆಪಿ ನಾಯಕರೂ ಹೊರತಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ ಸ್ವತಃ ಬಿಜೆಪಿ ನಾಯಕ ಅಶೋಕ್ ಅವರಿಗೆ ಏಡ್ಸ್ ಸೋಂಕು ತಗುಲಿಸಲು ಪ್ರಯತ್ನಿಸಿದ್ದ ಅಘಾತಕಾರಿ ಸಂಗತಿ ಹೊರ ಬಂದಿದೆ. ಇಂತಹ ವಿಕೃತರತ್ನನನ್ನು ತಲೆ ಮೇಲೆ ಹೊತ್ತು ಮೆರೆಸುವ @BJP4Karnataka ಪಕ್ಷದ ನಾಯಕರು HIV ಪರೀಕ್ಷೆ ಮಾಡಿಸಿಕೊಂಡು ಏಡ್ಸ್ ನಿಯಂತ್ರಣದ ಅಭಿಯಾನಕ್ಕೆ ಸಹಕರಿಸಬೇಕು ಎಂದು ಟ್ವೀಟ್ ಮಾಡಿದೆ. ಸದ್ಯಕ್ಕೆ ಶಾಸಕ ಮುನಿರತ್ನ, ಅತ್ಯಾಚಾರ ಆರೋಪದಲ್ಲಿ ಮತ್ತೆ ಜೈಲು ಪಾಲಾಗಿದ್ದಾರೆ. ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಆರೋಪದಲ್ಲಿ ಹೇಗೋ ಜಾಮೀನು ಪಡೆದಿದ್ದರು. ಹೊರ ಬರುತ್ತೇನೆ ಎಂದುಕೊಳ್ಳುವಾಗಲೇ ಮತ್ತೆ ಪೊಲೀಸರ ಬಳಿ ಲಾಕ್ ಆಗಿದ್ದಾರೆ.