ಸುದ್ದಿಒನ್, ಶಿವಮೊಗ್ಗ, ಜನವರಿ. 03 : ರಾಜ್ಯ ಬಿಜೆಪಿ ಹಿರಿಯ ಮುಖಂಡ, ಕರ್ನಾಟಕ ರಾಜ್ಯ ಉಗ್ರಾಣ ನಿಮಗದ ಮಾಜಿ ಅಧ್ಯಕ್ಷ ಎಚ್.ಟಿ.ಬಳೇಗಾರ್ (73) ಬೆಂಗಳೂರಿನಲ್ಲಿ ಗುರುವಾರ ನಿಧನರಾದರು.
ಮೃತರಿಗೆ ಪುತ್ರಿಯರಾದ ಐಶ್ವರ್ಯಾ, ಭೂಮಿಕಾ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಶಿಕಾರಿಪುರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ನೂರಾರು ಸಂಖ್ಯೆಯಲ್ಲಿ ವಿವಿಧ ಪಕ್ಷದ ಮುಖಂಡರು ಅಂತಿಮ ದರ್ಶನ ಪಡೆದರು. ಬಳಿಕ ಅಂತ್ಯಕ್ರಿಯೆ ನಡೆಯಿತು.
ಸಂತಾಪ: ಬಿ.ಎಸ್.ಯಡಿಯೂರಪ್ಪ ಸೇರಿ ಅನೇಕ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಬಳೇಗಾರ್ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಕಣಕ್ಕೆ ಇಳಿಸುವ ಹಾಗೂ ರಾಜ್ಯಾದ್ಯಂತ ನಾಯಕ ಸಮುದಾಯದ ಸಂಘಟನೆ ಹೊಣೆ ವಹಿಸುವ ಉದ್ದೇಶವನ್ನು ಮುಖಂಡರು
ಹೊಂದಿದ್ದರು. ಆದರೆ, ಈಗ ಅವರ ಅಕಾಲಿಕ ಸಾವು ಪಕ್ಷ ಹಾಗೂ ಬೆಂಬಲಿಗರಿಗೆ ಹೆಚ್ಚು ನಷ್ಟವನ್ನುಂಟು ಮಾಡಿದೆ. ಯುವ ಪೀಳಿಗೆಯನ್ನು ಬೆಳೆಸುವ ಮಹಾದಾಸೆ ಹೊಂದಿದ್ದ ಅವರ ನಿಧನ ದೊಡ್ಡ ನಷ್ಟವಾಗಿದೆ. ಕುಟುಂಬ ಹಾಗೂ ಬೆಂಬಲಿಗರಿಗೆ ಈ ದುಃಖ ಭರಿಸುವ ಶಕ್ತಿ ದೇವರ ದಯಪಾಲಿಸಲಿ ಎಂದು ಚಿತ್ರದುರ್ಗದ ಉದ್ಯಮಿ ಟಿ.ಸಿದ್ದೇಶ್, ಮುಖಂಡರಾದ ಪಿ.ಎಲ್. ಪರಶುರಾಮ್, ಕೃಷ್ಣಮೂರ್ತಿ, ವಜ್ರಮೂರ್ತಿ ಇತರರು ಸಂತಾಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.