ಹಾಸನ: ಸದ್ಯ ರಾಜ್ಯ ರಾಜಕೀಯದಲ್ಲಿ ಮೂಡಾ ಹಗರಣ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ. ಸಿದ್ದರಾಮಯ್ಯ ಅವರ ಖುರ್ಚಿಗೆ ಕಂಟಕ ತಂದಿರುವಂತ ಕೇಸ್ ಇದಾಗಿದೆ. ಸದ್ಯ ಕೋರ್ಟ್ ನಲ್ಲಿ ಈ ಕೇಸ್ ಸಂಬಂಧ ವಿಚಾರಣೆ ನಡೆಯುತ್ತಿದೆ. ಈ ಬೆನ್ನಲ್ಲೇ ಮಾಜಿ ಸಂಸದ ಪ್ರತಾಪ್ ಸಿಂಹ ಮೂಡಾ ವಿಚಾರದಲ್ಲಿ ಹೇಳಿಕೆಯೊಂದನ್ನು ನೀಡಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನವರದ್ದೂ ಹಗರಣಗಳಿವೆ ಎಂದಿದ್ದಾರೆ.
ಹಾಸನದಲ್ಲಿ ಮಾತನಾಡಿದ ಪ್ರತಾಪ್ ಸಿಂಹ ಅವರು, ಎಲ್ಲಾ ಪಕ್ಷದ ನಾಯಕರು ಅಡ್ಜೆಸ್ಟ್ಮೆಂಟ್ ರಾಜಕೀಯ ಮಾಡಿಕೊಂಡಿದ್ದಾರೆ. ಮೂಡಾದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನವರದ್ದು ಹಗರಣಗಳಿವೆ. ಆದರೆ ಈ ಬಗ್ಗೆ ಕಾಂಗ್ರೆಸ್ ನವರು ಯಾಕೆ ಮಾತನಾಡುತ್ತಿಲ್ಲ ಎಂಬುದು ಗೊತ್ತಿಲ್ಲ. ಅವರು ಮಾಡಿರುವ ಆರೋಪಗಳಿಗೆ ಕಾಂಗ್ರೆಸ್ ನವರು ಒಂದು ಸಾಕ್ಷಿಯನ್ನಾದರೂ ಕೊಟ್ಟಿದ್ದಾರಾ..? ಆಡಳಿತ, ಪೊಲೀಸ್ ವ್ಯವಸ್ಥೆ ಅವರ ಬಳಿಯೇ ಇದೆ ಎಂದು ಪ್ರಶ್ನೆ ಮಾಡಿದ್ದಾರೆ.
ನಾನು ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಇದ್ದೀನಿ. ದೆಹಲಿಗೆ ಹೋಗಬೇಡ ಎಂದರೆ ಇಲ್ಲೆ ಇರು ಅಂತ ಅರ್ಥ ಅಲ್ಲವಾ. ಮೈಸೂರು ನನ್ನ ಕರ್ಮ ಭೂಮಿ ಅಲ್ಲಿಯೇ ಇರುತ್ತೀನಿ. ಅಲ್ಲಿಯೇ ರಾಜಕಾರಣ ಮಾಡುತ್ತೀನಿ ಎಂದಿದ್ದಾರೆ. ಇದೇ ವೇಳೆ 40% ಕಮಿಷನ್ ಬಗ್ಗೆಯೂ ಮಾತನಾಡಿದ ಪ್ರತಾಪ್ ಸಿಂಹ, ತನಿಖಾ ಏಜೆನ್ಸಿ, ಅವರ ಹತ್ತಿರವೇ ಇದೆ. ಹಗರಣದ ಬಗ್ಗೆ ತನಿಖೆ ಮಾಡಿಸಲಿ. ಪ್ರಿಯಾಂಕ್ ಖರ್ಗೆ ಬಳಿ ದಾಖಲೆಗಳಿದಾವೆ ಎನ್ನುತ್ತಾರೆ. ದಾಖಲೆ ಇದ್ರೆ ಇಟ್ಕೊಂಡು ಏನು ಮಾಡುತ್ತೀರಿ. ಕರ್ನಾಟಕ ಸರ್ಕಾರವೇ ನಿಮ್ಮ ಕೈಲಿದೆ. ಯಾವ್ಯಾವ ಹಗರಣಗಳು ಇದಾವೇ ಎಲ್ಲಾ ಹಗರಣದ ಬಗ್ಗೆಯೂ ತನಿಖೆ ಮಾಡಿಸಿ ಎಂದಿದ್ದಾರೆ.