ಚಿತ್ರದುರ್ಗ,(ಮೇ.24) : ಬೇರೆ ಪಕ್ಷದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅವರ ಬ್ಯಾಂಕ್ ಬ್ಯಾಲಸ್ಸ್, ಚುನಾವಣೆಗೆ ಎಷ್ಟು ಖರ್ಚು ಮಾಡುತ್ತಾನೆ, ಅವನ ಹಿನ್ನಲೆ ಏನು ಎಂದು ತಿಳಿದು ಟಿಕೇಟ್ ನೀಡುತ್ತಾರೆ ಆದರೆ ಬಿಜೆಪಿ ಪಕ್ಷದಲ್ಲಿ ಆತ ಎಷ್ಟು ವರ್ಷ ಪಕ್ಷದಲ್ಲಿ ಕಾರ್ಯಕರ್ತನಾಗಿದ್ದ, ಏನು ಕೆಲಸ ಮಾಡಿದ್ದಾನೆ, ಪಕ್ಷದ ಸಂಘಟನೆಗಾಗಿ ಏನು ಮಾಡಿದ್ದಾನೆ ಎಂದು ನೋಡಿ ಟಿಕೆಟ್ ನೀಡುತ್ತಾರೆ ನಮ್ಮ ಪಕ್ಷ ಕಾರ್ಯಕರ್ತರ ಪಕ್ಷವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ನವೀನ್ ತಿಳಿಸಿದರು.
ನಗರದ ಜಗಲೂರು ಮಹಾಲಿಂಗಪ್ಪ ಟವರ್ಸ್‍ನಲ್ಲಿ ಹಮ್ಮಿಕೊಂಡಿದ್ದ ಬಾಜಪದ ಕಾರ್ಯಕಾರಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಇದು ಚುನಾವಣೆಯ ವರ್ಷವಾಗಿದೆ. ಮುಂದಿನ ಒಂದು ವರ್ಷದಲ್ಲಿ ಚುನಾವಣೆ ಬರಲಿದೆ ಅದಕ್ಕೆ ಈಗಿನಿಂದಲೇ ಸಜ್ಜಾಗಬೇಕಿದೆ. ಚುನಾವಣೆ ಎನ್ನುವುದು ರಾಜಕೀಯ ಪಕ್ಷಗಳಿಗೆ ಫೈನಲ್ ಪರೀಕ್ಷೆಯಾಗಿದೆ ಇಲ್ಲಿ ಉತ್ತೀರ್ಣರಾದವರು ಮುಂದಿನ ಐದು ವರ್ಷ ರಾಜ್ಯವನ್ನಾಳಬಹುದಾಗಿದೆ. ಇದಕ್ಕಾಗಿ ಈಗಿನಿಂದಲೇ ತಯಾರಿಯನ್ನು ನಡೆಸಬೇಕಿದೆ ಪಕ್ಷದ ಕಾರ್ಯಕರ್ತರು ತಮ್ಮ ಬೂತ್‍ಗಳಲ್ಲಿ ಮತದಾರರಿಗೆ ಸರ್ಕಾರದ ಸಾಧನೆಯನ್ನು ತಿಳಿಸುವ ಕಾರ್ಯವನ್ನು ಮಾಡಬೇಕಿದೆ ಇದರ ಬಗ್ಗೆ ಈಗಿನಿಂದಲೇ ಗಮನವನ್ನು ನೀಡುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ವಿರೋಧ ಪಕ್ಷದವರು ಜನತೆಯ ಭಾವನೆಗಳನ್ನು ಕೆಣಕುವ ತಪ್ಪು ಮತ್ತು ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾರೆ. ಇದನ್ನು ತಿಳಿದ ಪಕ್ಷದ ಕಾರ್ಯಕರ್ತರು ಇರುವ ನೈಜ ಸ್ಥಿತಿಯನ್ನು ಮತದಾರರಿಗೆ ತಿಳಿಸುವಕಾರ್ಯವಾಗಬೇಕಿದೆ. ಬೆಲೆ ಏರಿಕೆಯಾದಾಗ ಬೊಬ್ಬೆ ಹೊಡೆದ ವಿರೋಧ ಪಕ್ಷದವರು ಬೆಲೆ ಇಳಿಕೆಯಾದಾಗ ಯಾರು ಸಹಾ ಮಾತನಾಡಲಿಲ್ಲ, ಬೇರೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ಹೂಲಿಸಿದರೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ತುಂಬಾ ಉತ್ತಮವಾಗಿದೆ. ದೇಶದ ಜನತೆಗೆ ಆಹಾರದ ಕೊರತೆಯಾಗದಂತೆ ಪ್ರಧಾನ ಮಂತ್ರಿಯವರು ನೋಡಿಕೊಂಡಿದ್ದಾರೆ. ಈ ರೀತಿಯ ವಿಷಯದ ಬಗ್ಗೆ ಕಾರ್ಯಕರ್ತರು ಮತದಾರರಿಗೆ ತಿಳಿಸುವ ಕಾರ್ಯವಾಗಬೇಕಿದೆ ಎಂದು ನವೀನ್ ಹೇಳಿದರು.
ಮುಂಬರುವ ಚುನಾವಣೆಯಲ್ಲಿ ಪಕ್ಷ ಗೆಲುವನ್ನು ಸಾಧಿಸಲು ಯಾವ ಕಾರ್ಯಕರ್ತರು ಸಹಾ ರಕ್ತವನ್ನು ಹರಿಸುವ ಅಗತ್ಯ ಇಲ್ಲ ಇದರ ಬದಲಾಗಿ ನಿಮ್ಮ ಬೆವರನ್ನು ಹರಿಸುವುದರ ಮೂಲಕ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ. ಕಾರ್ಯಕರ್ತರಿಗೆ ಪಕ್ಷ ನೀಡಿದ ಕೆಲಸವನ್ನು ಚಾಚು ತಪ್ಪದೆ ಮಾಡುವುದರ ಮೂಲಕ ಉತ್ತಮ ಕಾರ್ಯಕರ್ತ ಎನಿಸಿಕೊಳ್ಳಿ, ಚುನಾವಣೆಯಲ್ಲಿ ಕೇಂದ್ರ ಸರ್ಕಾರದ 8 ವರ್ಷದ ಸಾಧನೆಯನ್ನು ತಿಳಿಸುವ ಹಾಗೂ ರಾಜ್ಯ ಸರ್ಕಾರದ ಸಾಧನೆಯನ್ನು ತಿಳಿಸಿ ಕೆಲಸದ ಮೇಲೆ ಶ್ರದ್ದೆ ಇರಲಿ ಎಂದರು.
ಮೇ.29ರ ಪ್ರಧಾನಮಂತ್ರಿಗಳ ಮನಕೀ ಬಾತ್ ಕಾರ್ಯಕ್ರಮವನ್ನು ಈ ಬಾರಿ ನಗರದ ಕೋಟೆಯ ಮುಂಭಾಗದಲ್ಲಿ ದೊಡ್ಡದಾದ ಪರದೆಯ ಮೇಲೆ ನೋಡಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಚಿತ್ರದುರ್ಗ ಆಯ್ಕೆಯಾಗಿದೆ. ಈ ಸಮಯದಲ್ಲಿ ಕೋಟೆಯ ಗೈಡ್‍ಗಳು, ಕ್ರೀಡಾಪಟುಗಳ ಹಾಜರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ನವೀನ್ ತಿಳಿಸಿದರು.
ಜಿಲ್ಲಾಧ್ಯಕ್ಷ ಮುರಳಿ, ಪ್ರಭಾರಿ ಸಹ ಸಂಚಾಲಕ ಪ್ರೇಮ ಕುಮಾರ್, ಪ್ರದಾನ ಕಾರ್ಯದರ್ಶಿ ರಾಜೇಶ್, ನರೇಂದ್ರ ಭಾಗವಹಿಸಿದ್ದರು.