ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಜ.06): ಹಿಂದೆ ಬ್ರಿಟಿಷರು ಒಡೆದಾಳುವ ನೀತಿ ಅನುಸರಿಸುತ್ತಿದ್ದುದನ್ನು ಈಗ ಬಿಜೆಪಿ ಯವರು ಪಾಲಿಸುತ್ತಿರುವುದ್ದಾರೆಂದು ಜನರಿಗೆ ತಿಳಿಸುವುದಕ್ಕಾಗಿ ಪರಿಶಿಷ್ಟ ಜಾತಿ ಪರಿಶಿಷ್ಠ ಪಂಗಡ ಜನಾಂಗದ ಐಕ್ಯತಾ ಸಮಾವೇಶ ಮಾಡುತ್ತಿದ್ದೇವೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಸಮಾವೇಶದ ಉಸ್ತುವಾರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ನಾಳೆ ನಡೆಯಲಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನಾಂಗದ ಐಕ್ಯತಾ ಸಮಾವೇಶದ ಅಂಗವಾಗಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ನಗರ ಮತ್ತು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಾವುಗಳು ಸಮಾವೇಶ ಮಾಡುತ್ತಿರುವುದು ಯಾರನ್ನೊ ಮೆಚ್ಚಿಸಿ ನಾಯಕನನ್ನಾಗಿ ಮಾಡಲು ಅಲ್ಲ. ಎಲ್ಲರೂ ಒಂದು ವೇದಿಕೆಯಲ್ಲಿ ಸೇರಿಕೊಂಡು ಸಮಸ್ಯೆಗಳನ್ನು ಹೇಳಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಸಮಾವೇಶದ ಉದ್ದೇಶ.
ರಾಜ್ಯದ 224 ಕ್ಷೇತ್ರಗಳ ಪೈಕಿ 173 ಕ್ಷೇತ್ರಗಳಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ವಿಧಾನಸಭಾ ಚುನಾವಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಹೆಚ್ಚಿನ ಜನ ಸಮಾವೇಶಕ್ಕೆ ಬನ್ನಿ ಎಂದು ಕಾರ್ಯಕರ್ತರಲ್ಲಿ ವಿನಂತಿಸಿದರು.
ಮಾಜಿ ಸಚಿವ ಶಿವರಾಜ್ ತಂಗಡಗಿ ಮಾತನಾಡುತ್ತ ಚಿತ್ರದುರ್ಗದಲ್ಲಿ ನಡೆಯುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಐಕ್ಯತಾ ಸಮಾವೇಶ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಬೇಕು. ಚಿತ್ರದುರ್ಗ ನಗರ ಹಾಗೂ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 30 ರಿಂದ 40 ಸಾವಿರ ಜನರನ್ನು ಕರೆತರುವ ಹೊಣೆಗಾರಿಕೆ ಕಾರ್ಯಕರ್ತರು ಹಾಗೂ ಮುಖಂಡರುಗಳ ಮೇಲಿದೆ. 23 ಪಂಚಾಯಿತಿಗಳಿದ್ದು, ಒಂದೊಂದು ಪಂಚಾಯಿತಿಯಿಂದ ಐದುನೂರು ಮಂದಿಯಾದರೂ ಸಮಾವೇಶಕ್ಕೆ ಬರಬೇಕು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಎಲ್ಲಾ ಜಾತಿಗಳಿಗೂ ಕೊಡುಗೆ ಕೊಟ್ಟಿದ್ದು, ಕಾಂಗ್ರೆಸ್ ಪಕ್ಷ. ಬಿಜೆಪಿ.ಅಲ್ಲ. ಎನ್ನುವುದನ್ನು ಸಮಾವೇಶದಲ್ಲಿ ಜನರಿಗೆ ತಿಳಿಸಬೇಕು. ನಾಗಮೋಹನ್‍ದಾಸ್ ವರದಿ ಜಾರಿಗೆ ತಂದು ಮೀಸಲಾತಿ ಕೊಟ್ಟಿದ್ದು, ಕಾಂಗ್ರೆಸ್. ನಿಮ್ಮ ನಿಮ್ಮ ವಾರ್ಡ್ ಏರಿಯಾಗಳಿಗೆ ಹೋಗಿ ಸಮಾವೇಶಕ್ಕೆ ಜನರನ್ನು ಕರೆಯಿರಿ.
ಬಿಜೆಪಿ.ಯ ಅನ್ಯಾಯ, ಅಕ್ರಮವನ್ನು ಜನ ಸಹಿಸಿಕೊಳ್ಳುತ್ತಿಲ್ಲ. ಜನ ಬರಲು ತಯಾರಿದ್ದಾರೆ. ನೀವುಗಳು ಕರೆಯಬೇಕಷ್ಟೆ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಐತಿಹಾಸಿಕ ಸಮಾವೇಶದ ಮೂಲಕ ಚಿತ್ರದುರ್ಗದಿಂದ ರಹಕಹಳೆ ಊದಿದ ಸಂದೇಶ ವಿರೋಧಿಗಳಿಗೆ ಮುಟ್ಟಬೇಕು ಎನ್ನುವ ಕಾರಣಕ್ಕಾಗಿ ಪಕ್ಷ ಸಮಾವೇಶವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಕಾರ್ಯಕರ್ತರು ಉತ್ಸುಕರಾಗಿ ಕೆಲಸ ಮಾಡಿ ಎಂದು ಕರೆ ನೀಡಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಮುಖಂಡರು, ಕಾರ್ಯಕರ್ತರು, ಜನ ಬರುತ್ತಾರೆ. ಎಲ್ಲಾ ರಂಗಗಳಲ್ಲೂ ಕೇಂದ್ರ ರಾಜ್ಯ ಸರ್ಕಾರ ವಿಫಲವಾಗಿರುವುದರಿಂದ ಭ್ರಷ್ಟ ಬಿಜೆಪಿ.ಯನ್ನು ಮುಂದಿನ ಚುನಾವಣೆಯಲ್ಲಿ ಕಿತ್ತೊಗೆಯಲು ಜನ ಸಿದ್ದರಿದ್ದಾರೆ. ಸಂವಿಧಾನವನ್ನು ಬುಡ ಸಮೇತ ಕಿತ್ತು ಹಾಕುವ ಹುನ್ನಾರ ನಡೆಯುತ್ತಿದೆ.
ಎಸ್ಸಿ.ಎಸ್ಟಿ. ಮುಸಲ್ಮಾನರನ್ನು ನಿರ್ನಾಮ ಮಾಡಲು ಹೊರಟಿರುವ ಬಿಜೆಪಿ.ಗೆ ಈ ಸಮಾವೇಶ ನಡುಕ ಹುಟ್ಟಿಸಬೇಕು. ರಾಜ್ಯದಲ್ಲಿ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಸಿದ್ದರಾಮಯ್ಯನವರು 165 ಯೋಜನೆಗಳನ್ನು ಕೊಡುಗೆಯಾಗಿ ಜನತೆಗೆ ನೀಡಿರುವುದರ ಹಿಂದೆ ಡಾ.ಜಿ.ಪರಮೇಶ್ವರ್‍ರವರ ಸಹಕಾರವಿದೆ ಎಂದು ಹೇಳಿದರು.
ಮಾಜಿ ಸಚಿವ ಕೆ.ಶಿವಮೂರ್ತಿನಾಯ್ಕ, ಮಾಜಿ ವಿಧಾನಪರಿಷತ್ ಸದಸ್ಯ ರಘುಆಚಾರ್, ಹನುಮಲಿ ಷಣ್ಮುಖಪ್ಪ, ರಾಮಪ್ಪ ನೇರ್ಲಗುಂಟೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಯೋಗೇಶ್‍ಬಾಬು, ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಡಾ.ಬಿ.ತಿಪ್ಪೇಸ್ವಾಮಿ ಜೆ.ಜೆ.ಹಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಬಿ.ಟಿ.ಜಗದೀಶ್, ಡಿ.ಎನ್.ಮೈಲಾರಪ್ಪ, ನಾಗರಾಜ್‍ಜಾನ್ಹವಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತನಂದಿನಿಗೌಡ, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಅಧ್ಯಕ್ಷ ಹೆಚ್.ಅಂಜಿನಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿಕಾಂತ್ ವೇದಿಕೆಯಲ್ಲಿದ್ದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಫಾತ್ಯರಾಜನ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮೋಕ್ಷರುದ್ರಸ್ವಾಮಿ, ಮುನಿರಾ ಎ.ಮಕಾಂದಾರ್, ಕಾರ್ಯದರ್ಶಿ ರುದ್ರಾಣಿ, ಮಮತ ನೇರ್ಲಗಿ, ಭಾಗ್ಯಮ್ಮ ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.