ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಏ.26) : ಸದಾಶಿವ ಆಯೋಗದ ವರದಿ ಜಾರಿಗಾಗಿ ಅನೇಕ ವರ್ಷಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಬಿಜೆಪಿ ಸ್ಪಂದಿಸಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಚಳ್ಳಕೆರೆ ಟೋಲ್‍ಗೇಟ್‍ನಲ್ಲಿರುವ ಎಸ್.ಎಸ್.ಕೆ.ಎಸ್. ಸಮುದಾಯ ಭವನದಲ್ಲಿ ಬುಧವಾರ ನಡೆದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿ ಸಂಘಟನೆಗಳ ಸಮುದಾಯದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಒಳ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರನ್ನು ದಿಕ್ಕು ತಪ್ಪಿಸುತ್ತಿದೆ. ಸದನದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ಗೆ ಅಪಮಾನ ಮಾಡಿ ರಾಜೀನಾಮೆ ನೀಡುವಂತೆ ಮಾಡಿದ್ದು, ಕಾಂಗ್ರೆಸ್. ದಲಿತರಿಗಾಗಿ ಮತ್ತೊಂದು ದೇಶ ರಾಷ್ಟ್ರ ಬೇಕು ಎಂದು ಅಂಬೇಡ್ಕರ್ ಎಂದಿಗೂ ಬ್ರಿಟೀಷರಿಗೆ ಕೇಳಲಿಲ್ಲ. ಸ್ವಚ್ಚ ಭಾರತ್ ಯೋಜನೆಯಡಿ ದೇಶದ ನಲವತ್ತು ಕೋಟಿ ಜನರಿಗೆ ಪ್ರಧಾನಿ ಮೋದಿ ಶೌಚಾಲಯ ಕಟ್ಟಿಸಿದ್ದಾರೆ. ಆಯುಷ್ಮಾನ್ ಭಾರತ್ ಕೇಂದ್ರದ ಕೊಡುಗೆ. ಸಾಮಾಜಿಕ ನ್ಯಾಯದ ಪರವಾಗಿರುವ ಬಿಜೆಪಿ.ಯಿಂದ ಭೋವಿ. ಲಂಬಾಣಿಗಳಿಗೆ ಅನ್ಯಾಯವಾಗಿಲ್ಲ. ಒಳಮೀಸಲಾತಿಯಿಂದ ತೆಗೆಯಲ್ಲ ಎನ್ನುವುದನ್ನು ಮೊದಲು ಕಾಂಗ್ರೆಸ್‍ನವರು ಅರ್ಥಮಾಡಿಕೊಳ್ಳಬೇಕು ಎಂದು ವಿರೋಧಿಗಳ ಟೀಕೆಗಳಿಗೆ ತಿರುಗೇಟು ನೀಡಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ ಎಸ್ಸಿ.ಎಸ್ಟಿ.ಗಳ ಪರವಾಗಿರುವ ಪಕ್ಷ ಬಿಜೆಪಿ. ಇಲ್ಲಿಯವರೆಗೂ ನಿಮ್ಮನ್ನು ಓಟ್ ಬ್ಯಾಂಕನ್ನಾಗಿ ಮಾಡಿಕೊಂಡು ಬರುತ್ತಿತ್ತು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ.ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನಿಮ್ಮ ಪರಿಸ್ಥಿತಿ ಸುಧಾರಿಸಿದೆ. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಸದ ಎ.ನಾರಾಯಣಸ್ವಾಮಿರವರಿಂದ ಸಾಕಷ್ಟು ಅಭಿವೃದ್ದಿಯಾಗಿದೆ. ಅಂಬೇಡ್ಕರ್ ತತ್ವ ಸಿದ್ದಾಂತದ ಮೇಲೆ ಬಿಜೆಪಿ. ನಿಂತಿದೆ. ಲೋಕಸಭೆ ಚುನಾವಣೆಯಲ್ಲಿ ಅಂಬೇಡ್ಕರ್ ವಿರುದ್ದ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿ ಸೋಲಿಸಿದ್ದು, ಕಾಂಗ್ರೆಸ್ ಎನ್ನವುದನ್ನು ಎಸ್ಸಿ.ಎಸ್ಟಿ.ಗಳು ಮರೆಯಬಾರದು.
ಶೋಷಿತರು, ಕಟ್ಟ ಕಡೆಯವರ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಅಂತ್ಯೋದಯ ಯೋಜನೆ ಜಾರಿಗೆ ತಂದಿದೆ ಎಂದು ಹೇಳಿದರು.
ಗುಜರಾತ್‍ನ ಬೋರ್‍ಬಿ ವಿಧಾನಸಭಾ ಕ್ಷೇತ್ರದ ಶಾಸಕ ಜಗದೀಶ್‍ಬಾಯಿ ಮಕ್ವಾನ, ಚುನಾವಣಾ ಉಸ್ತುವಾರಿ ಗೀತ ಧನಂಜಯ, ಯುವ ಮುಖಂಡರುಗಳಾದ ಡಾ.ಸಿದ್ದಾರ್ಥ, ಜಿ.ಎಸ್.ಅನಿತ್‍ಕುಮಾರ್, ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ, ವೀರೇಶ್, ಪ್ರಧಾನ ಕಾರ್ಯದರ್ಶಿ ನರೇಂದ್ರ ಹೊನ್ನಾಳ್, ನಗರಸಭೆ ಸದಸ್ಯ ಅಂಗಡಿ ಮಂಜಣ್ಣ, ಎಸ್ಸಿ. ಮೋರ್ಚಾ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಭಾರ್ಗವಿ ದ್ರಾವಿಡ್, ಜಿಲ್ಲಾ ಕಾರ್ಯದರ್ಶಿ ಮೋಹನ್ ವೇದಿಕೆಯಲ್ಲಿದ್ದರು.
ವಕ್ತಾರ ನಾಗರಾಜ್ ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್ ಇನ್ನು ಅನೇಕರು ಸಭೆಯಲ್ಲಿ ಹಾಜರಿದ್ದರು.