ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ಜು.22) : ದೇಶದ ಸ್ವಾತಂತ್ರ್ಯಕ್ಕಾಗಿ ತನ್ನನ್ನು ತಾನು ಮುಡುಪಾಗಿಟ್ಟುಕೊಂಡು ಜನತೆಯನ್ನು ಬಡಿದೆಬ್ಬಿಸಿದ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಪ್ರಾಣ ತ್ಯಾಗ ಮಾಡಿದವರಲ್ಲ. ಬ್ರಿಟೀಷರ ಪರವಾಗಿದ್ದ ಬಿಜೆಪಿಯವರ ವಿರುದ್ದ ದೇಶದ ಜನ ಬೇಸತ್ತಿದ್ದಾರೆಂದು ಮಾಜಿ ಸಚಿವೆ ಉಮಾಶ್ರೀ ಆಕ್ರೋಶ ವ್ಯಕ್ತಪಡಿಸಿದರು.
ದ್ವೇಷ ರಾಜಕಾರಣಕ್ಕಾಗಿ ಐಟಿ, ಇಡಿ, ಸಿಬಿಐ.ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವ ಕೇಂದ್ರ ಬಿಜೆಪಿ.ಸರ್ಕಾರದ ವಿರುದ್ದ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪಕ್ಷದ ಕಚೇರಿ ಎದುರು ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬ್ರಿಟೀಷರು ಭಾರತಕ್ಕೆ ವ್ಯಾಪಾರಕ್ಕಾಗಿ ಬಂದವರು. ಬಿಜೆಪಿ.ಯವರು ಈಗ ವ್ಯಾಪಾರ ಮಾಡುತ್ತಿದ್ದಾರೆ. ಬಿಜೆಪಿ.ಯವರಿಗೂ ಬ್ರಿಟೀಷರಿಗೂ ವ್ಯತ್ಯಾಸವೇ ಇಲ್ಲದಂತಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಜಿ.ಎಸ್.ಟಿ. ಇದರಿಂದ ಬಡವರು, ಮಧ್ಯಮ ವರ್ಗದವರು ಕಂಗಾಲಾಗಿದ್ದಾರೆ. ಅನೇಕ ರೈತರು, ನೇಕಾರರು, ಕುಶಲ ಕರ್ಮಿಗಳು, ನೇಣು ಹಾಕಿಕೊಂಡಿದ್ದಾರೆ.
ನೋಟುಗಳ ಅಮಾನ್ಯಿಕರಣ, ಕೊರೋನಾದ ಸಂಕಷ್ಟ ಸಂದರ್ಭಗಳನ್ನು ದೇಶದ ಜನ ಇನ್ನು ಮರೆತಿಲ್ಲ. ಸುಳ್ಳಿನ ಸರದಾರ ನರೇಂದ್ರ ಮೋದಿ ಕಾಂಗ್ರೆಸ್‌ನ ನೆಹರು, ಇಂದಿರಾಗಾಂಧಿ, ಸೋನಿಯಾ ಗಾಂದಿ, ರಾಹುಲ್‌ಗಾಂಧಿ, ಸಿದ್ದರಾಮಯ್ಯ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಇವರುಗಳ ಬಗ್ಗೆ ಅಪ ಪ್ರಚಾರ ಮಾಡುತ್ತ ಶಕ್ತಿಗಳನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ.
ಇಂದಿರಾಗಾಂಧಿ ಜಾರಿಗೆ ತಂದ ಇಪ್ಪತ್ತು ಅಂಶಗಳ ಕಾರ್ಯಕ್ರಮಗಳನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಯಾವುದೇ ಹಗರಣ ನಡೆದಿಲ್ಲ. ಸೋನಿಯಾರವರ ಒಂದು ರೋಮವನ್ನು ಅಲುಗಾಡಿಸಲು ಬಿಜೆಪಿ.ಯವರಿಂದ ಸಾಧ್ಯವಿಲ್ಲ. ಸೋನಿಯಾ ಭಾರತದ ಸೊಸೆ, ಪ್ರಜೆ ಎನ್ನುವುದನ್ನು ಕೋಮುವಾದಿ ಬಿಜೆಪಿ.ಯವರು ಮೊದಲು ಅರಿಯಲಿ ಎಂದು ಎಚ್ಚರಿಸಿದರು.
ಎ.ಐ.ಸಿ.ಸಿ.ಕಾರ್ಯದರ್ಶಿ ಮಯೂರ ಜೈಕುಮಾರ್ ಮಾತನಾಡಿ ದೇಶದ ಪ್ರಧಾನಿಯಾಗುವ ಅವಕಾಶ ಸಿಕ್ಕರು ಸೋನಿಯಾಗಾಂಧಿ ನಯವಾಗಿ ತಿರಸ್ಕರಿಸಿದರು. ದೇಶಕ್ಕಾಗಿ ತ್ಯಾಗ ಬಲಿದಾನದ ಇತಿಹಾಸವುಳ್ಳ ಕಾಂಗ್ರೆಸ್‌ಗೆ ಕೆಟ್ಟ ಹೆಸರು ತರಬೇಕೆನ್ನುವ ದುರುದ್ದೇಶದಿಂದ ಕೇಂದ್ರ ಸರ್ಕಾರ ಐಟಿ, ಇಡಿ, ಸಿಬಿಐ.ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ದೇಶದ ಸ್ವಾತಂತ್ರö್ಯಕ್ಕಾಗಿ ಹುಟ್ಟಿಕೊಂಡ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಕಾಂಗ್ರೆಸ್‌ಗೆ ಸೇರಿದ್ದು, ಪೊಲಿಟಿಕಲ್ ಬ್ರೋಕರ್ ಸುಬ್ರಮಣ್ಯಸ್ವಾಮಿ ದೂರು ನೀಡಿರುವ ಕಾರಣಕ್ಕಾಗಿ ಸೋನಿಯಾಗಾಂಧಿ, ರಾಹುಲ್‌ಗಾಂಧಿಯವರನ್ನು ವಿಚಾರಣೆ ನಡೆಸುತ್ತಿರುವುದರಲ್ಲಿ ಅರ್ಥವಿಲ್ಲ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಉಸ್ತುವಾರಿ ಕೆ.ಎನ್.ರಾಜಣ್ಣ ಮಾತನಾಡುತ್ತ ಸೋನಿಯಾಗಾಂಧಿಯನ್ನು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿರುವ ಐಟಿ, ಇಡಿ, ಸಿಬಿಐ.ಸಂಸ್ಥೆ ಮತ್ತೆ ಸೋಮವಾರ ವಿಚಾರಣೆ ನಡೆಸಲಿದೆ. ಆಗರ್ಭ ಶ್ರೀಮಂತರಾಗಿರುವ ಗಾಂಧಿ ಕುಟುಂಬಕ್ಕೆ ಹಣ ಮಾಡುವ ಉದ್ದೇಶವಿಲ್ಲ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ದೇಶದ ಸ್ವಾತಂತ್ರö್ಯಕ್ಕಾಗಿ ಹುಟ್ಟಿಕೊಂಡಿದ್ದೆ ವಿನಃ ಹಣ ಗಳಿಕೆಗಾಗಿ ಅಲ್ಲ. ಆರ್ಥಿಕವಾಗಿ ಸಂಕಷ್ಟಕ್ಕೆ ಈಡಾದಾಗ ಕಾಂಗ್ರೆಸ್ ನೆರವು ನೀಡಿತು. ಬಿಜೆಪಿ.ನಲವತ್ತು ಪರ್ಸೆಂಟ್ ದಂಧೆಯನ್ನು ಮುಚ್ಚಿಕೊಳ್ಳಲು ದೇಶದ ಜನರ ಗಮನ ಬೇರೆಡೆ ಸೆಳೆಯುವುದಕ್ಕಾಗಿ ಇಂತಹ ಕುತಂತ್ರ ನಡೆಸುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಒಂದೆಡೆಯಾದರೆ ಜನಸಾಮಾನ್ಯರ ಆದಾಯ ಕುಸಿಯುತ್ತಿದೆ. ಯುವಕರು ನಿರುದ್ಯೋಗಿಗಳಾಗಿದ್ದಾರೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು 2023 ರಲ್ಲಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಂತೆ ಮುಖಂಡರುಗಳು ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ.ಎಂಟು ವರ್ಷಗಳಲ್ಲಿ ಬೇರೆ ಪಕ್ಷದವರನ್ನು ನಾಯಿ ನರಿಗಳಂತೆ ಖರೀಧಿಸಿ ಆಳುವ ಸರ್ಕಾರಗಳನ್ನು ಕೆಡವಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿರುವುದೇ ದೊಡ್ಡ ಸಾಧನೆ. ಗುಲಾಮಗಿರಿಯಲ್ಲಿದ್ದ ದೇಶವನ್ನು ಬ್ರಿಟೀಷರಿಂದ ಹೊರ ತರುವುದಕ್ಕಾಗಿ ನೆಹರು ಕುಟುಂಬ ಹೋರಾಟಕ್ಕೆ ಇಳಿಯಿತು. ಸ್ವರ್ಣಮಂದಿರದಲ್ಲಿ ಅಡಗಿದ್ದ ಉಗ್ರಗಾಮಿಗಳನ್ನು ಇಂದಿರಾಗಾಂಧಿ ಮಟ್ಟ ಹಾಕಿದ್ದರಿಂದ ಅಂಗರಕ್ಷಕರಿಂದಲೇ ಹತ್ಯೆಗೀಡಾದರು.
ರಾಜೀವ್‌ಗಾಂಧಿ ಕೂಡ ಹತ್ಯೆಗೊಳಗಾದರು. ಅತ್ತೆ, ಗಂಡನನ್ನು ಕಳೆದುಕೊಂಡ ಸೋನಿಯಾಗಾಂಧಿ ಮೋದಿಗಿಂತ ಮೊದಲೆ ದೇಶದ ಪ್ರಧಾನಿಯಾಗಬಹುದಿತ್ತು. ಆದರೆ ಅಧಿಕಾರಕ್ಕೆ ಆಸೆ ಪಡದೆ ದೇಶಕ್ಕಾಗಿ ತ್ಯಾಗ ಮಾಡಿದರು. ಮೋದಿ, ಅಮಿತ್‌ಷಾ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಸ್ವಾತಂತ್ರö್ಯ ಹೋರಾಟದ ಮುಖವಾಣಿಯಾಗಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಎಲ್ಲಿಯೂ ಭ್ರಷ್ಟಾಚಾರವೆಸಗಿಲ್ಲ. ವಿನಾ ಕಾರಣ ವಿಚಾರಣೆ ನೆಪದಲ್ಲಿ ಸೋನಿಯಾ, ರಾಹುಲ್‌ಗೆ ಹಿಂಸೆ ಕೊಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಬಿಜೆಪಿ.ವಾಮ ಮಾರ್ಗದಿಂದ ಅಧಿಕಾರ ಹಿಡಿಯಿತು. ಕಾಂಗ್ರೆಸ್ ರಾಜ ಮಾರ್ಗದಿಂದಲೆ ಇಲ್ಲಿಯವರೆಗೂ ಅಧಿಕಾರ ನಡೆಸಿಕೊಂಡು ಬಂದಿದೆ. ಈಗಲಾದರೂ ಸೇಡಿನ ರಾಜಕಾರಣ ಕೈಬಿಡಿ. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ದೇಶದ ಜನ ಸರಿಯಾಗಿ ಪಾಠ ಕಲಿಸಲಿದ್ದಾರೆ. ಬೆಲೆ ಏರಿಕೆ, ಜಿ.ಎಸ್.ಟಿ, ನಲವತ್ತು ಪರ್ಸೆಂಟ್ ಕಮಿಷನ್ ಇವುಗಳೆ ಬಿಜೆಪಿ.ಸಾಧನೆ. ನಮ್ಮ ಸರ್ಕಾರದಲ್ಲಿ ಅಗತ್ಯ ವಸ್ತುಗಳ ಬೆಲೆ ಜನಸಾಮಾನ್ಯರ ಕೈಗೆಟುಕುವಂತಿತ್ತು ಎಂದು ಹೇಳಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ಸಂವಿಧಾನವನ್ನು ಬುಡಮೇಲು ಮಾಡುವ ಉದ್ದೇಶದಿಂದ ಪ್ರಧಾನಿ ಮೋದಿ ಸಂವಿಧಾನಕ್ಕೆ ಅಡ್ಡಬಿದ್ದರು. ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಸುಖಾ ಸುಮ್ಮನೆ ಸೋನಿಯಾರವರ ವಿಚಾರಣೆ ನಡೆಸುತ್ತಿದೆ. ಮುಂದುವರೆದ ದೇಶಗಳಲ್ಲಿ ಬ್ಯಾಲೆಟ್ ಪೇಪರ್‌ನಿಂದ ಚುನಾವಣೆಗಳು ನಡೆಯುತ್ತವೆ. ನಮ್ಮ ದೇಶದಲ್ಲಿ ಯಂತ್ರದಿAದ ಚುನಾವಣೆ ನಡೆಯುತ್ತಿರುವ ಕಾರಣ ನಮ್ಮ ಪಕ್ಷ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು. ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಶಾಸಕರುಗಳನ್ನು ಖರೀಧಿಸುತ್ತಿರುವುದರ ವಿರುದ್ದ ಮೊದಲು ತನಿಖೆ ನಡೆಯಲಿ ಎಂದು ಒತ್ತಾಯಿಸಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ 2014 ರಲ್ಲಿ ದೇಶದ ಜನತೆಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ. ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕೆನ್ನುವ ಉದ್ದೇಶದಿಂದ ಸೋನಿಯಾರನ್ನು ವಿಚಾರಣೆ ನಡೆಸುತ್ತಿದೆ. 1937 ರಲ್ಲಿ ಆರಂಭಗೊAಡ ನ್ಯಾಷನಲ್ ಹೆರಾಲ್ಡ್ ಪತ್ರಿಕೆ 90 ಕೋಟಿ ರೂ.ಗಳ ಅಕ್ರಮ ಎಸಗಿದೆ ಎಂದು ಬಿಜೆಪಿ.ಹೇಳುತ್ತಿರುವುದರಲ್ಲಿ ಸತ್ಯಾಂಶವಿಲ್ಲ ಎನ್ನುವುದು ದೇಶದ ಜನರಿಗೆ ಗೊತ್ತಾಗಿದೆ. ಹಾಗಾಗಿ ಹೆದರುವುದು ಬೇಡ ಎಂದು ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಉಪಾಧ್ಯಕ್ಷರುಗಳಾದ ಕುಮಾರ್‌ಗೌಡ, ಡಿ.ಟಿ.ವೆಂಕಟೇಶ್, ನಜ್ಮತಾಜ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಮಾಜಿ ಶಾಸಕರುಗಳಾದ ಎ.ವಿ.ಉಮಾಪತಿ, ಬಿ.ಜಿ.ಗೋವಿಂದಪ್ಪ, ಎಸ್.ತಿಪ್ಪೇಸ್ವಾಮಿ, ಕೆ.ಪಿ.ಸಿ.ಸಿ.ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್, ಭೀಮಸಮುದ್ರದ ಜಿ.ಎಸ್.ಮಂಜುನಾಥ್, ಹನುಮಲಿ ಷಣ್ಮುಖಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಯೋಗೇಶ್‌ಬಾಬು, ವಿಧಾನಪರಿಷತ್ ಪರಾಜಿತ ಅಭ್ಯರ್ಥಿ ಸೋಮಶೇಖರ್, ವಿಧಾನಪರಿಷತ್ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತ ನಂದಿನಿಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮೀಕಾಂತ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಪರಿಶಿಷ್ಟ ವರ್ಗ ವಿಭಾಗದ ಅಧ್ಯಕ್ಷ ಹೆಚ್.ಅಂಜಿನಪ್ಪ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ಲಾ, ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮೋಹನ್ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು, ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರುಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.