ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಹಲವು ಕ್ಷೇತ್ರಗಳ ರಾಜಖಿಯ ವಿಚಾರ ಸಾಕಷ್ಟು ಗಮನ ಸೆಳೆದಿದೆ. ಅದರಲ್ಲೂ ಮಂಡ್ಯ ಈ ಬಾರಿಯೂ ರಣಕಣವಾಗಲಿದೆ ಎಂದೇ ಭಾವಿಸಲಾಗಿತ್ತು. ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್, ಯಾವುದೇ ಕಾರಣಕ್ಕೂ ಮಂಡ್ಯ, ಹಾಸನ, ಕೋಲಾರ ಬಿಟ್ಟುಕೊಡಲ್ಲ ಎಂಬ ಪಟ್ಟು ಹಿಡಿದಿತ್ತು. ಇದೀಗ ತಮ್ಮ ಹಠದಿಂದ ಬೇಕಾದ ಕ್ಷೇತ್ರವನ್ನು ಪಡೆದುಕೊಂಡಿದೆ.
ಅರಮನೆ ಮೈದಾನದಲ್ಲಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿಯು ರಾಜ್ಯ ಮಟ್ಟದ ಕಾರ್ಯಗಾರ ನಡೆಸುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸೀಟು ಹಂಚಿಕೊಂಡು ಸ್ಪರ್ಧೆ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಹಾಸನ, ಮಂಡ್ಯ ಹಾಗೂ ಕೋಲಾರ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟಿದ್ದೇವೆ ಎಂದು ಕಾರ್ಯಾಗಾರದಲ್ಲಿ ಬಿಜೆಪಿಯ ಚುನಾವಣಾ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲಾ ಮಾಹಿತಿ ನೀಡಿದ್ದಾರೆ.
ಮಂಡ್ಯ, ಹಾಸನ, ಕೋಲಾರದಲ್ಲಿ ಅಭ್ಯರ್ಥಿ ಯಾರೆಂಬುದು ಮುಖ್ಯವಲ್ಲ. ಕಾರ್ಯಕರ್ತರೆಲ್ಲ ಒಟ್ಟಾಗಿ ಪೂರ್ತಿ ಶ್ರದ್ದೆಯನ್ನಿಟ್ಟು ಮನಪೂರ್ವಕವಾಗಿ ಕೆಲಸ ಮಾಡಬೇಕು. 25 ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಜೆಡಿಎಸ್ ಎಲ್ಲಿಯು ಕೂಡ ಹಸ್ತಕ್ಷೇಪ ಮಾಡಿಲ್ಲ. ಹೀಗಾಗಿ ಅವರು ಕೇಳಿದ ಮೂರು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದೇವೆ. ಮೂರು ಕ್ಷೇತ್ರಗಳ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿ. ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಪ್ರಧಾನಿ ಮೋದಿಗಾಗಿ ಒಟ್ಟಾಗಿ ಕೆಲಸ ಮಾಡಬೇಕು. ನಿಮ್ಮ ವೈಯಕ್ತಿಕ ಮುನಿಸು ಏನೇ ಇದ್ದರು ಬಿಟ್ಟು ಬಿಡಿ. ಗೆಲುವಿನತ್ತ ಎಲ್ಲರು ಗಮನ ಕೊಡಿ ಎಂದು ಸಭೆಯಲ್ಲಿ ಎಲ್ಲರಿಗೂ ಕಿವಿ ಮಾತು ಹೇಳಿದ್ದಾರೆ.