ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817
ಚಿತ್ರದುರ್ಗ,(ಮಾ.29) : ಕೇಂದ್ರ ಸರ್ಕಾರ ಕಾಂಗ್ರೆಸ್ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದೆ. ನ್ಯಾಯಾಲಯ ತೀರ್ಪು ನೀಡಿ ಮೇಲ್ಮನವಿ ಸಲ್ಲಿಸಲು ಅವಕಾಶವನ್ನು ನೀಡಿದ್ದರೂ ಸಹಾ ಸಂಸದ ರಾಹುಲ್ ಗಾಂಧಿಯವರ ಲೋಕಸಭೆಯ ಸ್ಥಾನವನ್ನು ಅನರ್ಹ ಮಾಡುವುದರ ಮೂಲಕ ಬಿಜೆಪಿ ಸೇಡನ್ನು ತೀರಿಸಿಕೊಂಡಿದೆ ಎಂದು ಮಾಜಿ ಸಚಿವ ಹೆಚ್.ಅಂಜನೇಯ ಬಿಜೆಪಿಯ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದರು.
ನಗರದಲ್ಲಿ ಡಿಸಿಸಿವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ಅಸಾಂವಿಧಾನಿಕ ನಡೆಯನ್ನು ವಿರೋಧಿಸಿ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿ, ರಾಹುಲ್ ಗಾಂಧಿಯವರು ಸತ್ಯವನ್ನು ಹೇಳಿದ್ಧಾರೆ. ಇದನ್ನು ಸಹಿಸಲಾಗದ ಬಿಜೆಪಿ ಅವರ ಮೇಲೆ ಮೊಕದ್ದಮೆಯನ್ನು ಹಾಕುವುದರ ಮೂಲಕ ಶಿಕ್ಷೆ ವಿಧಿಸುವಂತೆ ಮಾಡಿದೆ. ನ್ಯಾಯಾಲಯ ಮೇಲ್ಮನವಿ ಹೋಗಲು ಸಮಯವನ್ನು ನೀಡಿದೆ. ಆದರೆ ಇದರ ಬಗ್ಗೆ ತಿಳಿಯದ ಬಿಜೆಪಿ ಅತುರವಾಗಿ ರಾಹುಲ್ ಗಾಂಧಿಯವರ ಸಂಸತ್ ಸ್ಥಾನವನ್ನು ವಜಾಗೊಳಿಸಿದೆ. ಇದೆ ಸೇಡಿನ ರಾಜಕೀಯವಾಗಿದೆ ಎಂದು ದೂರಿದರು.
ರಾಹುಲ್ ಗಾಂಧಿಯವರು ಉತ್ತಮವಾದ ಸಂಸದೀಯ ಪಟುವಾಗಿದ್ದು, ಪಾರ್ಲಿಮೆಂಟ್‌ನಲ್ಲಿ ದೇಶದ ಬಗ್ಗೆ ವಿವಿಧ ರೀತಿಯ ವಿಷಯಗಳನ್ನು ಚರ್ಚೆ ಮಾಡುವುದರ ಮೂಲಕ ಆಡಳಿತ ಪಕ್ಷಕ್ಕೆ ಚಳಿಯನ್ನು ಬಿಡಿಸಿದ್ದರು. ಇದರಿಂದ ಬಚಾವಾಗಲು ಆಡಳಿತ ಪಕ್ಷ ನ್ಯಾಯಾಲಯದ ತೀರ್ಪನ್ನು ಬಳಕೆ ಮಾಡಿಕೊಂಡು ಅವರನ್ನು ಸಂಸದ ಸ್ಥಾನದಿಂದ ಅನರ್ಹ ಮಾಡಿದೆ.
ಬಿಜೆಪಿ ಉತ್ತಮವಾದ ಆಡಳಿತವನ್ನು ನೀಡದೇ ದುರಾಡಳಿತವನ್ನು ನೀಡುತ್ತಾ ಶ್ರೀಮಂತರ ಪರವಾಗಿ ಕೆಲಸವನ್ನು ಮಾಡುತ್ತಿದೆ. ಬಡವರನ್ನು ನಿರ್ಲಕ್ಷ್ಯ ಮಾಡಿದೆ. ಶ್ರೀಮಂತರ ಸಾಲವನ್ನು ಮನ್ನಾ ಮಾಡಿದ ಸರ್ಕಾರ ಬಡವರ ಸಾಲವನ್ನು ವಸೂಲಿ ಮಾಡುವಂತೆ ಸೂಚನೆ ನೀಡಿದೆ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆಯನ್ನು ನೀಡಲಾಗಿದೆ ಎಂದು ಆಂಜನೇಯ ಆರೋಪಿಸಿದರು.
ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆಯನ್ನು ಮಾಡುವುದರ ಮೂಲಕ ಜನತೆಯ ಕಷ್ಠಗಳನ್ನು ಆಲಿಸಿದ್ದಾರೆ. ಇದರ ಜನ ಮನ್ನಣೆಯನ್ನು ಸಹಿಸಲಾದ ಬಿಜೆಪಿ ಅವರ ಮೇಲೆ ಈ ತಂತ್ರವನ್ನು ಮಾಡಿ ಲೋಕಸಭೆಯಿಂದ ಹೂರಹಾಕಿದ್ದಾರೆ.ಇದು ಜನ ವಿರೋಧಿ ತಂತ್ರವಾಗಿದೆ ಇದನ್ನು ಯಾರು ಸಹಾ ಒಪ್ಪುವುದಿಲ್ಲ, ದೇಶದಲ್ಲಿ ಕಾಂಗ್ರೆಸ್ ಬಗ್ಗೆ ಜನತೆ ತೋರುತ್ತಿರುವ ಅಭಿಮಾನವನ್ನು ಕಂಡು ಸಹಿಸಲಾಗದ ಬಿಜೆಪಿ ಸುಮಾರು 2-3 ವರ್ಷದ ಹಿಂದೆ ಆಡಿದ್ದ ಮಾತುಗಳನ್ನು ನೆಪವಾಗಿಟ್ಟು ಕೊಂಡು ಅನರ್ಹ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ಈ ಕೋಡಲೇ ಅನರ್ಹ ಆದೇಶವನ್ನು ಹಿಂಪಡೆಯಬೇಕು, ರಾಜನೀತಿಗೆ ಆನುಗುಣವಾಗಿ ರಾಜಕೀಯವನ್ನು ಮಾಡುವಂತೆ ಬಿಜೆಪಿಗೆ ಸಲಹೆ ನೀಡಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ತಾಜ್‌ಪೀರ್ ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಎಸ್.ಸಿ.ಸೆಲ್ ಅಧ್ಯಕ್ಷ ಜಯ್ಯಣ್ಣ, ಎಸ್.ಟಿ.ಸೆಲ್ ಅಧ್ಯಕ್ಷ ಅಂಜನಪ್ಪ, ಒಬಿಸಿ ಸೆಲ್ ಅಧ್ಯಕ್ಷ ಎನ್.ಡಿ.ಕುಮಾರ್, ಮೈನಾರಿಟಿ ಸೆಲ್ ಅಧ್ಯಕ್ಷ ಅಬ್ದುಲ್ಲಾ, ಮಹಿಳಾ ಘಟಕ ಅಧ್ಯಕ್ಷೆ ಶ್ರೀಮತಿ ಗೀತಾ ನಂದಿನಿ ಗೌಡ, ಆಶ್ವತ್ ನಾಯ್ಡು, ಚೋಟು, ಮುದಸೀರ್ ನವಾಜ್, ನಜ್ಮತಾಜ್, ಮೈಲಾರಪ್ಪ, ಮಧುಗೌಡ, ಸೈಯದ್ ಅಲ್ಲಾ ಭಕ್ಷಿ, ಪ್ರಕಾಶ್ ಬಿ.ಟಿ.ಜಗದೀಶ್ ಪ್ರಕಾಶ್ ರಾಮ ನಾಯ್ಕ್ ಸೇರಿದಂತೆ ಇತರರು ಭಾಗವಹಿಸಿದ್ದರು.