ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ಅಕ್ಟೋಬರ್.02 : ದೇಶಕ್ಕೆ ಸ್ವಾತಂತ್ರ್ಯ ಸುಮ್ಮನೆ ಬಂದಿಲ್ಲ. ಸಾವಿರಾರು ಮಂದಿ ಪ್ರಾಣ ಬಿಟ್ಟಿದ್ದಾರೆ. ಲಕ್ಷಾಂತರ ಜನ ಎಲ್ಲವನ್ನು ಕಳೆದುಕೊಂಡು ಜೈಲಿಗೆ ಹೋಗಿದ್ದಾರೆ. ರಾಜ್ಯಾಂಗ, ಭಾರತ, ಸ್ವಾತಂತ್ರ್ಯ ನಮ್ಮದು ಎಂದು ಕಾರ್ಯಕರ್ತರು ಎದೆತಟ್ಟಿ ಕೋಮುವಾದಿಗಳಿಗೆ ಹೇಳಬೇಕಿದೆ ಎಂದು ರಾಜ್ಯಸಭೆ ಮಾಜಿ ಸದಸ್ಯ ಹೆಚ್.ಹನಮಂತಪ್ಪ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ರಾಷ್ಟ್ರಪಿತ ಮಹಾತ್ಮಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್‍ಬಹದ್ದೂರ್‍ಶಾಸ್ತ್ರಿ ಇವರುಗಳ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
ಲಾಲ್‍ಬಹದ್ದೂರ್ ಶಾಸ್ತ್ರಿ ಬಡತನದಿಂದ ಬಂದವರು, ರೈಲ್ವೆ ಮಂತ್ರಿಯಾಗಿದ್ದ ಅವರು ಕೇರಳದಲ್ಲಿ ರೈಲು ಅಪಘಾತವಾದಾಗ ನೈತಿಕ ಹೊಣೆಹೊತ್ತು ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರು. ದೇಶದಲ್ಲಿ ಅಂದು ಆಹಾರಕ್ಕೆ ಅಭಾವವಿದ್ದಾಗ ವಾರದಲ್ಲಿ ಒಂದು ಹೊತ್ತು ಉಪವಾಸವಿರುವಂತೆ ಜನತೆಗೆ ಕರೆ ಕೊಟ್ಟಿದ್ದರು. ಪ್ರಧಾನಮಂತ್ರಿಯಾಗಿದ್ದರೂ ಸರ್ಕಾರಿ ಕಾರು ಹತ್ತಲಿಲ್ಲ. ಮಕ್ಕಳು ಜಟಕಾದಲ್ಲಿ ತಿರುಗಾಡುತ್ತಿದ್ದರು. ಗಾಂಧಿ ಮತ್ತು ಲಾಲ್‍ಬಹದ್ದೂರ್‍ಶಾಸ್ತ್ರಿ ಇವರುಗಳು ಬ್ರಿಟೀಷರ ವಿರುದ್ದ ದೇಶದ ಸ್ವಾತಂತ್ರ್ಯಕ್ಕಾಗಿ ನೇತೃತ್ವ ವಹಿಸಿಕೊಂಡಿದ್ದರು ಎಂದು ಸ್ಮರಿಸಿದರು.
ದೇಶದ ಪ್ರಧಾನಿ ಮೋದಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಇನ್ನು ಹುಟ್ಟಿರಲಿಲ್ಲ. ಸ್ವಾತಂತ್ರ್ಯಕ್ಕಾಗಿ ಎಲ್ಲಾ ಜಾತಿ, ಧರ್ಮದವರು ಸೇರಿ ಹೋರಾಡಿದ್ದರ ಫಲವಾಗಿ ಭಾರತವಾಗಿದೆ. ಯಾವುದೇ ಒಂದು ಜಾತಿಗೆ ಭಾರತ ಸೇರಿದ್ದಲ್ಲ. ಎಲ್ಲರಿಗೂ ಸಮಾನತೆ, ಸ್ವಾತಂತ್ರ್ಯ ನೀಡಿರುವ ರಾಜ್ಯಾಂಗ ಈಗ ತೊಂದರೆಯಲ್ಲಿದೆ. ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರಪಂಚದಲ್ಲಿಯೇ ಬುದ್ದಿವಂತ ಮನುಷ್ಯ ಎಂದು ವಿಶ್ವಸಂಸ್ಥೆ ನಿರ್ಧರಿಸಿದೆ. ಬಿಜೆಪಿ.ಯ ಮೋದಿ ಕಣ್ಣಿಗೆ ರಾಜ್ಯಾಂಗ ಸರಿ ಕಾಣುತ್ತಿಲ್ಲ. ಅದಕ್ಕಾಗಿ ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟಿರುವುದರ ವಿರುದ್ದ ಕಾಂಗ್ರೆಸ್‍ನವರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಒಂದು ದಿನವೂ ಹೋರಾಡದೆ ಸ್ವಾತಂತ್ರ್ಯ ನಮ್ಮದು ಎಂದು ಹೇಳಿಕೊಳ್ಳುತ್ತಿರುವವರು ಬ್ರಿಟೀಷರಿಗೆ ಏಜೆಂಟರಾಗಿದ್ದರು. ದೇಶಕ್ಕಾಗಿ ಬಿಜೆಪಿ.ಯ ಬಿಡಿಗಾಸಿನ ಕೊಡುಗೆಯಿಲ್ಲ. ವಿಛಿದ್ರಕಾರಕ ಶಕ್ತಿಗಳನ್ನು ಎದುರಿಸಬೇಕಿದೆ. ಭಾರತ, ಭಾರತೀಯರು, ರಾಜ್ಯಾಂಗವನ್ನು ಉಳಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಕಾಂಗ್ರೆಸ್‍ನವರ ಮೇಲಿದೆ ಎಂದು ಕಾರ್ಯಕರ್ತರನ್ನು ಜಾಗೃತಿಗೊಳಿಸಿದ ಹೆಚ್.ಹನುಮಂತಪ್ಪ ರಾಜ್ಯಾಂಗ ನಮ್ಮದು ಎಂದು ಕೋಮುವಾದಿಗಳನ್ನು ಎಚ್ಚರಿಸಿ ಎಂದು ತಾಕೀತು ಮಾಡಿದರು.
ವಿಧಾನಪರಿಷತ್ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್ ಮಾತನಾಡಿ ಮಹಾತ್ಮಗಾಂಧಿ ಹಾಗೂ ಲಾಲ್‍ಬಹದ್ದೂರ್‍ಶಾಸ್ತ್ರಿ ಇವರುಗಳು ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ದಿನಗಳನ್ನು ಪ್ರತಿಯೊಬ್ಬರು ನೆನಪಿಸಿಕೊಳ್ಳಬೇಕು. ದೇಶದ ಪ್ರಧಾನಿಯಾಗಿದ್ದ ಲಾಲ್‍ಬಹದ್ದೂರ್‍ಶಾಸ್ತ್ರಿ ಜೈಜವಾನ್, ಜೈಕಿಸಾನ್ ಎನ್ನುವ ಸ್ಲೋಗನ್ ಹೊರಡಿಸಿದರು. ಸ್ವಾತಂತ್ರ್ಯಕ್ಕಾಗಿ ಅನೇಕ ಹಿರಿಯರು ಪ್ರಾಣ ತ್ಯಾಗ ಮಾಡಿದ್ದಾರೆ. ಗಾಂಧಿಜಿ ಲಂಡ್‍ನ್‍ನಲ್ಲಿ ಶಿಕ್ಷಣ ಪಡೆದು ಬ್ಯಾರಿಸ್ಟರ್ ಆಗಿದ್ದರು. ಸತ್ಯ ಮತ್ತು ಅಹಿಂಸೆಯ ಮೂಲಕ ಬ್ರಿಟೀಷರ ವಿರುದ್ದ ಹೋರಾಡಿ ದೇಶವನ್ನು ದಾಸ್ಯದಿಂದ ಮುಕ್ತಿಗೊಳಿಸಿದರು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡುತ್ತ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೆ ಕಾಂಗ್ರೆಸ್. ಗಾಂಧಿ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಾರೆ. ಆಫ್ರಿಕಾಕ್ಕೆ ಹೋಗಿದ್ದಾಗ ಗಾಂಧಿ ಅನೇಕ, ಅವಮಾನ, ನೋವು, ಸಂಕಟಗಳನ್ನು ಅನುಭವಿಸಿ ನಂತರ ಭಾರತಕ್ಕೆ ಬಂದು ಬ್ರಿಟೀಷರ ವಿರುದ್ದ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಸಂವಿಧಾನಕ್ಕೆ ಅಪಚಾರವೆಸಗುತ್ತಿರುವವರು ದೇಶ ಆಳುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಈಗಿನಿಂದಲೆ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.
ಜೈಜವಾನ್, ಜೈಕಿಸಾನ್ ಎನ್ನುವ ಸ್ಲೋಗನ್ ಕೊಟ್ಟ ಲಾಲ್‍ಬಹದ್ದೂರ್‍ಶಾಸ್ತ್ರಿ, ಹಾಗೂ ರಾಷ್ಟ್ರಪಿತ ಮಹಾತ್ಮಗಾಂಧಿರವರ ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಶ್ರೀಮತಿ ರೇಣುಕಶಿವು, ಉಪಾಧ್ಯಕ್ಷ ಶಬ್ಬೀರ್‍ಅಹಮದ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶ್ರೀಮತಿ ಗೀತ ನಂದಿನಿಗೌಡ, ನಗರಸಭೆ ಮಾಜಿ ಉಪಾಧ್ಯಕ್ಷ ಎನ್.ಬಿ.ಟಿ.ಜಮೀರ್, ಮೆಹಬೂಬ್‍ಖಾತೂನ್, ಇಂಟೆಕ್ ಜಿಲ್ಲಾಧ್ಯಕ್ಷ ಅಶೋಕ್‍ನಾಯ್ಡು, ಚಂದ್ರಣ್ಣ, ಕಾಂಗ್ರೆಸ್ ಎಸ್.ಟಿ.ವಿಭಾಗದ ಜಿಲ್ಲಾಧ್ಯಕ್ಷ ಹೆಚ್.ಅಂಜಿನಪ್ಪ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಸೈಯದ್ ಖುದ್ದೂಸ್, ಪ್ರಕಾಶ್ ರಾಮನಾಯ್ಕ, ಫೈಲ್ವಾನ್ ತಿಪ್ಪೇಸ್ವಾಮಿ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ಡಾ.ರಹಮತ್‍ವುಲ್ಲಾ, ಚಾಂದ್‍ಪೀರ್, ಕಾಂಗ್ರೆಸ್ ನಗರ ಘಟಕದ ಉಪಾಧ್ಯಕ್ಷ ಡಿ.ಆರ್.ಲೋಕೇಶ್ವರಪ್ಪ, ಡಿ.ಕುಮಾರ್ ಪಿಳ್ಳೆಕೆರನಹಳ್ಳಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ನ್ಯಾಯವಾದಿ ಸುದರ್ಶನ್, ಭಾಗ್ಯಮ್ಮ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.