ಸುದ್ದಿಒನ್, ಚಿತ್ರದುರ್ಗ, ಜ. 03 : ಎಲ್ಲಾ ವೃತ್ತಿ ಕಾಯಕದವರನ್ನು ಮತ್ತು ಅವರು ಮಾಡುತ್ತಿದ್ದ ವೃತ್ತಿಗೆ ಗೌರವವನ್ನು ಬಸವಣ್ಣ ಕೊಟ್ಟಿದ್ದರು. ಅವರಲ್ಲಿ ಒಬ್ಬರು ಶಿವಶರಣ ಮೇದಾರ ಕೇತಯ್ಯನವರು. ವ್ಯಕ್ತಿಗೆ ಎಷ್ಟು ಗೌರವ ಅಥವಾ ಪ್ರಾಧಾನ್ಯತೆ ಇತ್ತೋ ವೃತ್ತಿಗೂ ಅಷ್ಟೇ ಪ್ರಾಮುಖ್ಯತೆ ನೀಡಿದ್ದ ಕಾರಣ ಅಲ್ಲಿ ಯಾವುದೇ ವೃತ್ತಿಯನ್ನು ಅಗೌರವದಿಂದ ಕಾಣಲಿಲ್ಲ. ನೂರಾರು ಕಸಬು ಮಾಡುವವರು ಅಲ್ಲಿ ನೆಲೆ ನಿಂತರು. ಈ ಎಲ್ಲರಿಗೂ ಗೌರವ ನೀಡಿದ ಬಸವಣ್ಣನವರ ಸಾಧನೆಗೆ ಕರ್ನಾಟಕ ಸರ್ಕಾರವು ಸಾಂಸ್ಕøತಿಕ ನಾಯಕ ಎಂದು ಪರಿಗಣಿಸಿ ಮಾನ್ಯತೆ ನೀಡಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ಸ್ಮರಿಸಿಕೊಂಡರು.
ಶ್ರೀಗಳು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿಂದು ಬೆಳಗ್ಗೆ ಏರ್ಪಡಿಸಿದ್ದ ಶಿವಶರಣ ಮೇದಾರ ಕೇತಯ್ಯನವರ ಜಯಂತಿ (ಶರಣೋತ್ಸವ)ಯ ಸಾನ್ನಿಧ್ಯ ವಹಿಸಿ ಮಾತನಾಡುತ್ತ, ವಚನ ಸಾಹಿತ್ಯ ದೇಶದ 24 ಭಾಷೆಗಳಿಗೆ ತರ್ಜುಮೆಗೊಂಡಿದೆ. ಅದು ಪ್ರಪಂಚದ ಇತರೆ ಭಾಷೆಗಳಿಗೂ ಭಾಷಾಂತರಗೊಂಡಾಗ ಬಸವಣ್ಣ ಮತ್ತಿತರ ಶರಣರ ವ್ಯಕ್ತಿತ್ವವು ಈ ನಾಡಿಗೆ ತಿಳಿಯುತ್ತದೆ. ಅಂತಹ ಕೆಲಸ ಬಸವ ಸಮಿತಿ ಸೇರಿದಂತೆ ಇತರೆಯವರು ನಡೆಸಿದ್ದಾರೆ. ಪ್ರಪಂಚದ ಬೇರೆ ಬೇರೆ ದಾರ್ಶನಿಕರು ತಮ್ಮ ತತ್ವ ಸಿದ್ಧಾಂತಗಳ ಮೂಲಕ ಪರಿಚಯವಾದರು. ಆದರೆ ಬಸವಾದಿ ಶರಣರ ವಿಚಾರಗಳು ಅಷ್ಟಾಗಿ ಪ್ರಚಾರ ಪಡೆಯದೆ ಬೆಳಕಿಗೆ ಬರಲಿಲ್ಲ. ಈಗೀಗ ಎಲ್ಲಾ ಕಡೆ ಪಸರಿಸುತ್ತಿದೆ. 12ನೇ ಶತಮಾನದ ಶರಣ ಶಿರೋಮಣಿಗಳಲ್ಲಿ ಒಬ್ಬರಾದ ಮೇದಾರ ಕೇತಯ್ಯನವರು ತಮ್ಮ ವೃತ್ತಿ ಬಿದಿರನ್ನು ಬಳಸಿ ಅನೇಕ ವಿಧವಾದ ವಸ್ತುಗಳನ್ನು ತಯಾರು ಮಾಡುತ್ತಿದ್ದರು. ಇದಕ್ಕೆ ಕೌಶಲ್ಯ ಅಗತ್ಯವಿತ್ತು. ಅಂತಹ ಕೆಲಸದಲ್ಲಿ ನೈಪುಣ್ಯತೆ ಪಡೆದು ಆಕರ್ಷಕ ಮಾದರಿಯ ಕಲಾಕೃತಿಗಳನ್ನು ಹೆಣೆಯುತ್ತಿದ್ದರು. ಇವರು ಮಾಡಿದ ತೊಟ್ಟಿಲು ಹುಟ್ಟುವಾಗ ಬೇಕು. ನಂತರ ಸತ್ತಾಗ ಚಟ್ಟ ಕಟ್ಟಲು ಇವರ ನೆರವು ಅಗತ್ಯ. ಇಂತಹ ಕೆಲಸ ಮಾಡುತ್ತಲೇ ಕಾಯಕ, ದಾಸೋಹ, ಜಂಗಮಪ್ರೇಮಿಯಾಗಿ ಜೀವನ ನಡೆಸಿದರು. ಆಗ ವೃತ್ತಿಗಳಾಗಿದ್ದವು ಈಗ ಕಡ್ಡಾಯವಾಗಿ ಜಾತಿಗಳಾಗಿ ಪರಿಗಣಿಸಿ ನೂರಾರು ಜಾತಿಗಳು ಸೃಷ್ಟಿಯಾಗಿರುವುದು ವಿಷಾದಕರ. ವೃತ್ತಿಪರತೆಗಿಂತ ಜಾತಿಪ್ರೇಮವೇ ಅತಿಯಾಗಿದೆ ಎಂದು ನುಡಿದರು.
ಸಮಾರಂಭದ ಸಮ್ಮುಖ ವಹಿಸಿದ್ದ ಶ್ರೀ ಬಸವ ಮುರುಘೇಂದ್ರ ಸ್ವಾಮಿಗಳು ಮಾತನಾಡಿ, ತಾವು ಮಾಡುವ ವೃತ್ತಿಯಲ್ಲಿ ಯಾವುದೇ ತಾರತಮ್ಯ ಎಣಿಸದೆ ಅದಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದ ಶರಣರು ತಾವು ಮಾಡುವ ಕೆಲಸವನ್ನು ತುಂಬಾ ಭಾವಪರವಶತೆಯಿಂದ ಮಾಡಿ ಸೈ ಎನಿಸಿಕೊಂಡಿದ್ದರು. ಇವರು ಮಾಡುವ ಕಾಯಕಕ್ಕೆ ಎಲ್ಲಿಲ್ಲದ ಗೌರವವೂ ಇದ್ದ ಕಾರಣ ಎಂತಹುದೇ ಕೆಲಸ ಮಾಡಲು ಹಿಂಜರಿಯುತ್ತಿರಲಿಲ್ಲ. ಮೇದಾರ ಕೇತಯ್ಯನವರು ತಮ್ಮ ಬಿದಿರು ಕಾಯಕದಿಂದ ಕಲ್ಯಾಣದಲ್ಲಿ ಹೆಸರು ಪಡೆದವರು. ಒಂದು ಬಿದಿರು ಬುಟ್ಟಿ ಹೆಣೆಯಲು ಎಷ್ಟೊಂದು ಸಮಯ ಬೇಕು. ಅದನ್ನು ಅವರು ನಿಷ್ಠೆಯಿಂದ ಮಾಡುತ್ತಿದ್ದರು. ಅವರಿಗೆ ಒಮ್ಮೆ ಬಿದಿರು ಕಡಿಯುತ್ತಿರುವಾಗ ಮುತ್ತುರತ್ನಗಳು ದೊರೆಯುತ್ತವೆಂಬ ಪ್ರತೀತಿ. ಅದನ್ನವರು ತಮ್ಮ ಸ್ವಂತಕ್ಕೆ ಬಳಸದೆ ಇದು ನನಗೆ ಬೇಡ ಎಂದು ತಿಪ್ಪೆಗೆ ಎಸೆಯುತ್ತಾರೆಂಬ ಮಾತು ಬರುತ್ತದೆ. ಕೇವಲ ಸತ್ಯಶುದ್ಧ ಕಾಯಕ ಮಾಡುತ್ತಿದ್ದ ಇವರು ಅದರಿಂದ ತೃಪ್ತಿಪಡುತ್ತಿದ್ದರು. ಬಸವಣ್ಣ ಇನ್ನುಳಿದ ಶರಣರ ಗೌರವಾದರಗಳಿಂದ ಬದುಕು ಕಟ್ಟಿಕೊಂಡಿರುವೆ ಎಂದು ತಮ್ಮ ವಚನಗಳಲ್ಲಿ ಹೇಳಿದ್ದಾರೆ. ನೂರಾರು ವಚನಗಳು ಇದ್ದರೂ ಕೇವಲ 11 ವಚನಗಳು ಗವರೇಶ್ವರಲಿಂಗ ಎಂಬ ಅಂಕಿತದಲ್ಲಿ ರಚನೆಯಾಗಿವೆ. ಶರಣರ ವ್ಯಕ್ತಿತ್ವವನ್ನು ಎಷ್ಟು ಹೊಗಳಿದರೂ ಸಾಲದು ಅವರಿಗೆ ಅವರೇ ಸಾಟಿ ಎಂದು ನುಡಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ನಾಗರಾಜ ಸಂಗಂ, ಸಿದ್ದಾಪುರದ ಮಲ್ಲಿಕಾರ್ಜುನಪ್ಪ ಸೇರಿದಂತೆ ಭಕ್ತರು, ಅಭಿಮಾನಿಗಳು, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾಕಾಲೇಜುಗಳ ಕೆಲನೌಕರರು ಭಾಗವಹಿಸಿದ್ದರು. ನಗರದ ಗಾರೇಹಟ್ಟಿಯ ಬೃಹನ್ಮಠ ಪ್ರೌಢಶಾಲೆಯ ನಿರ್ವಹಣೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಶಿಕ್ಷಕಿ ಶ್ರೀಮತಿ ಆಶಾರಾಣಿ, ಬಸವನಗೌಡ, ಇತರ ಸಿಬ್ಬಂದಿ ಹಾಜರಿದ್ದರು.
ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದ ಉಮೇಶ್ ಪತ್ತಾರ್ ಮೇದಾರ ಕೇತಯ್ಯನವರ ವಚನದ ಮೂಲಕ ಪ್ರಾರ್ಥನೆ ಹಾಡಿದರು. ಶಿಕ್ಷಕ ಎಸ್. ರಾಜು ಸ್ವಾಗತಿಸಿದರು. ಇನ್ನೋರ್ವ ಶಿಕ್ಷಕ ರಾಜಾನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಮತ್ತೋರ್ವ ಶಿಕ್ಷಕ ಎಸ್.ಎಂ. ಪುಟ್ಟಸ್ವಾಮಿ ಶರಣು ಸಮರ್ಪಣೆ ಮಾಡಿದರು.






