ಬೆಂಗಳೂರು: ಇತ್ತೀಚೆಗೆ ರೌಡಿಶೀಟರ್ ಬಿಕ್ಲು ಶಿವನ ಕೊ*ಯಾಗಿತ್ತು. ಈ ಕೇಸಲ್ಲಿ ಶಾಸಕ ಭೈರತಿ ಬಸವರಾಜ್ ಹೆಸರು ಕೂಡ ಕೇಳಿ ಬಂದಿತ್ತು. ಇದೀಗ ಕೋರ್ಟ್ ನಿಂದ ಸೂಚನೆ ಬಂದಿದ್ದು, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ. ಭೈರತಿ ಬಸವರಾಜ್ ಅವರ ವಿಚಾರಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ, ರಾಜ್ಯದ ಹಿರಿಯ ಪೊಲೀಸರು ಅಲರ್ಟ್ ಆಗಿದ್ದಾರೆ. ತನಿಖಾ ತಂಡದ ಜೊತೆಗೆ ರಾತ್ರಿಯೇ ಸಭೆ ನಡೆಸಿದೆ. ಹೈಕೋರ್ಟ್ ಕೂಡ ಬಂಧನದ ವಿಚಾರವಾಗಿ ಯಾವುದೇ ರೀತಿಯ ರಕ್ಷಣೆ ನೀಡುವ ಮುಲಾಜಿಗೆ ಹೋಗಿಲ್ಲ. ಹೀಗಾಗಿ ಶಾಸಕ ಭೈರತಿ ಬಸವರಾಜ್ ಅವರಿಗೆ ಬಂಧನದ ಭೀತಿ ಶುರುವಾಗಿದೆ.
ರೌಡಿಶೀಟರ್ ಬಿಕ್ಲು ಶಿವನ ಹತ್ಯೆ ಕೇಸ್ ಶಾಸಕ ಭೈರತಿ ಬಸವರಾಜ್ ಅವರಿಗೆ ಸಂಕಷ್ಟ ತಂದೊಡ್ಡಿದೆ. ಇದರ ನಡುವೆ ಅವರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹಿನ್ನಡೆಯಾಗಿದೆ. ಈ ಸಂಬಂಧ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಪೀಠ ಬಂಧನದಿಂದ ರಕ್ಷಣೆ ನೀಡಲು ನಿರಾಕರಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಇಂದು ಬೆಳಗ್ಗೆ 11.30ಕ್ಕೆ ಪೊಲೀಸರ ಮುಂದೆ ಹಾಜರಾಗುವುದಕ್ಕೆ ಸೂಚನೆ ನೀಡಲಾಗಿದೆ. ಹೀಗಾಗಿ ಶಾಸಕ ಭೈರತಿ ಬಸವರಾಜ್ ಅವರು ಕೆಜಿಹಳ್ಳಿ ಎಸಿಪಿ ಪ್ರಕಾಶ್ ರಾಥೋಡ್ ಮುಂದೆ ಹಾಜರಾಗುವ ಎಲ್ಲಾ ಸಾಧ್ಯತೆಗಳು ಇದೆ. ತನಿಖಾಧಿಕಾರಿಗಳು ಕೂಡ ಎಲ್ಲಾ ರೀತಿಯ ತಯಾರಿಯನ್ನ ಮಾಡಿಕೊಂಡಿದ್ದಾರೆ. ಪುಲಕೇಶಿನಗರ ಠಾಣೆಗೆ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿ ದೇವರಾಜ್, ಎಸಿಪಿ ಗೀತಾ ಠಾಣೆಗೆ ಹೋಗಿ ಎಲ್ಲಾ ರೀತಿಯ ಪರಿಶೀಲನೆ ನಡೆಸಿದ್ದಾರೆ.
