ಬೆಂಗಳೂರು: ಜಾಲಿವುಡ್ ಸ್ಟುಡಿಯೋ ಮಾಡಿಕೊಂಡ ಯಡವಟ್ಟಿನಿಂದ ಇಂದು ಬಿಗ್ ಬಾಸ್ ಮನೆಗೆ ಬೀಗ ಜಡಿಯಲಾಗಿದೆ. ಹೀಗಾಗಿ ಮನೆಯಲ್ಲಿದ್ದ ಸ್ಪರ್ಧಿಗಳೆಲ್ಲಾ ಹೊರಗೆ ಬಂದಿದ್ದಾರೆ. ಟಾಪ್ ಒನ್ ರಿಯಾಲಿಟಿ ಶೋ ಆಗಿದ್ದ ಶೋ ಈಗ ಸ್ಥಗಿತಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದೀಗ ಕಲರ್ಸ್ ಕನ್ನಡ ಹೈಕೋರ್ಟ್ ಮೆಟ್ಟಿಲೇರಿದೆ.
ಕೊಳಚೆ ನೀರನ್ನು ಸಂಸ್ಕರಿಸದೆ ನಿಯಮ ಬಾಹಿರವಾಗಿ ಚರಂಡಿಗೆ ಹರಿಸಿದ ಪರಿಣಾಮ ಬಿಡದಿ ಬಳಿಯ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಲಾಗಿದೆ. ಈ ಅರ್ಜಿಯನ್ನು ಹೈಕೋರ್ಟ್ ಇಂ್ಉ ಮಧ್ಯಾಹ್ನ 2.30ಕ್ಕೆ ನಡೆಸಲಿದೆ. ಬಿಗ್ ಬಾಸ್ ತಂಡದ ಪರವಾಗಿ ವಕೀಲರ ತೇಜಸ್ವಿನಿ ಅರೂರ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದು, ತುರ್ತಾಗಿ ವಿಚಾರಣೆ ನಡೆಸುವಂತೆ ಕೋರ್ಟ್ ಗೆ ಮನವಿ ಮಾಡಿದ್ದಾರೆ. ಇಂದು ಮಧ್ಯಾಹ್ನ ಅರ್ಜಿ ವಿಚಾರಣೆ ನಡೆದ ಮೇಲೆ, ಹೈಕೋರ್ಟ್ ತೀರ್ಪಿನ ಬಳಿಕ ಬಿಗ್ ಬಾಸ್ ಭವಿಷ್ಯ ಏನಾಗಲಿದೆ ಎಂಬುದು ತಿಳಿಯಲಿದೆ.
ಬಿಗ್ ಬಾಸ್ ಶುರುವಾಗಿ ಇನ್ನು ಕಡಿಮೆ ಸಮಯವಷ್ಟೇ ಆಗಿದೆ. ಇಬ್ಬರು ಸ್ಪರ್ಧಿಗಳು ಹೊರಗೆ ಬಂದಿದ್ದಾರೆ. ಆರಂಭದಲ್ಲಿಯೇ ಬಿಗ್ ಬಾಸ್ ಗೆ ದೊಡ್ಡ ಕಂಟಕ ಎದುರಾಗಿದೆ.
ಬಲ್ಲ ಮೂಲಗಳಿಂದ ಬಂದ ಮಾಹಿತಿ ಪ್ರಕಾರ, ಇನ್ನು 10 ದಿನಗಳ ಕಾಲ ಶೋ ಸ್ಥಗಿತಗೊಂಡಿದೆ ಎನ್ನಲಾಗಿದೆ. ತಾವರೆಕೆರೆಯಲ್ಲಿ ಪರ್ಯಾಯ ಮನೆಗೆ ಪ್ಲ್ಯಾನಿಂಗ್ ನಡೆಸಲಾಗುತ್ತಿದೆ. ಸದ್ಯಕ್ಕೆ ಬಿಡದಿ ಈಗಲ್ ಟನ್ ರೆಸಾರ್ಟ್ ಗೆ ಸ್ಪರ್ಧಿಗಳು ಸ್ಥಳಾಂತರಗೊಂಡಿದ್ದಾರೆ. 15ಕ್ಕೂ ಹೆಚ್ಚು ರೂಮ್ಸ್ ಬುಕ್ ಮಾಡಿದ್ದು, ಕಲರ್ಸ್ ಕನ್ನಡ ಹೈಕೋರ್ಟ್ ಮೊರೆ ಹೋಗಿದೆ. ಇಂದೇ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ.

