ಬೆಂಗಳೂರು : ಕೋವಿಡ್ ಸಂಪೂರ್ಣ ಕಡಿಮೆ ಆಗಿದೆ ಅಂತಾ ನಾನು ಹೇಳೋದಿಲ್ಲ. ನಮ್ಮ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕಾಕರಣ ಆಗಿದೆ. ಹಾಗಾಗಿ, ನಾವು ಸ್ವಲ್ಪ ನೆಮ್ಮದಿಯಾಗಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದರು.
ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೊಸ ಕೊರೊನಾ ಪ್ರಕರಣ ಕಡಿಮೆ ಆಗ್ತಿವೆ. ಹೀಗಾಗಿ, ಕರ್ನಾಟಕ ಕೊರೊನಾ ಮುಕ್ತ ಆಗ್ತಿದ್ಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಕೋವಿಡ್ ಒಂದು ರಾಜ್ಯಕ್ಕೆ, ಒಂದು ದೇಶಕ್ಕೆ ಸೀಮಿತವಾಗಿಲ್ಲ. ವಿಶ್ವದಲ್ಲೇ ಸಾಂಕ್ರಾಮಿಕ ರೋಗ ಬಂದಿದೆ.
ವಿಶ್ವದಿಂದ ಸಂಪೂರ್ಣವಾಗಿ ಕೋವಿಡ್ ಹೊರ ಹಾಕುವವರೆಗೂ ಕೊವಿಡ್ ಮುಕ್ತ ಅಂತಾ ಹೇಳೋಕಾಗಲ್ಲ. ನಮ್ಮ ರಾಜ್ಯ, ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕಾಕರಣ ಆಗಿದೆ. ಹಾಗಾಗಿ, ನಾವು ಸ್ವಲ್ಪ ನೆಮ್ಮದಿಯಾಗಿದ್ದೇವೆ ಎಂದರು.ರಾಜ್ಯದಲ್ಲಿ ಶೇ.83ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಶೇ.38ರಷ್ಟು ಜನರಿಗೆ ಎರಡೂ ಡೋಸ್ ನೀಡಲಾಗಿದೆ. ಅನೇಕರಿಗೆ ರೋಗ ನಿರೋಧಕ ಶಕ್ತಿ ಬಂದಿದೆ.
ಗಡಿ ಭಾಗದ ಕೇರಳ, ಮಹಾರಾಷ್ಟ್ರಗಳಲ್ಲಿ ಕೋವಿಡ್ ಹೆಚ್ಚಾಗಿದ್ರೂ ನಮ್ಮಲ್ಲಿ ಇಳಿಯಲು ಲಸಿಕಾ ಅಭಿಯಾನವೇ ಕಾರಣ ಅಂತಾ ಸಚಿವರು ತಿಳಿಸಿದರು. ಇನ್ನೂ ಶಾಲೆಗಳ ಆರಂಭ ವಿಚಾರವಾಗಿ ಮಾತನಾಡಿದ ಅವರು,
1 ರಿಂದ 5ನೇ ತರಗತಿ ಮಕ್ಕಳಿಗೆ ಶಾಲೆ ತೆರೆಯುವ ಬಗ್ಗೆ ತಜ್ಞರ ಜತೆ ಸಿಎಂ ಸಭೆಗೆ ದಿನಾಂಕ ನಿಗದಿ ಮಾಡಲಾಗುವುದು. ದಿನಾಂಕ ನಿಗದಿ ಮಾಡಿದ ಮೇಲೆ ನಾನು, ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಶಿಕ್ಷಣ ಇಲಾಖೆ ಸಚಿವರು, ಅಧಿಕಾರಿಗಳು ಸಭೆ ಮಾಡ್ತೇವೆ. ಸಭೆಯಲ್ಲಿ ಈ ಕುರಿತು ನಿರ್ಧಾರ ಮಾಡುತ್ತೇವೆ ಎಂದು ಸುಧಾಕರ್ ಹೇಳಿದರು.