ಹೊಸದಿಲ್ಲಿ: ನಾಳೆ ಎಂದರೆ ಸೋಮವಾರ (ಜುಲೈ 11, 2022) ಕೋಲ್ಕತ್ತಾದ ಪೂರ್ವ-ಪಶ್ಚಿಮ ಕಾರಿಡಾರ್‌ನ ಸೀಲ್ದಾಹ್ ಮೆಟ್ರೋ ನಿಲ್ದಾಣದ ಉದ್ಘಾಟನೆಗೆ, ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ರೈಲ್ವೆ ಇಲಾಖೆ ಆಹ್ವಾನ ನೀಡಿರಲಿಲ್ಲ. ಈ ವಿಚಾರ TMC ಹೇಳುವ ಮೂಲಕ ಇಂದು ಮುಂಜಾನೆಯಿಂದಲೂ ವಿವಾದ ಭುಗಿಲೆದ್ದಿತ್ತು. ಈ ಬೆನ್ನಲ್ಲೆರ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲಾಗುತ್ತಿದೆ ಎಂದು ರೈಲಿನ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ, ಸಂಸದ ಸುದೀಪ್ ಬ್ಯಾನರ್ಜಿ ಅವರನ್ನು ಆಹ್ವಾನಿಸಲಾಗುತ್ತಿದೆ. ಸಂಸದ ಪ್ರಸೂನ್ ಬ್ಯಾನರ್ಜಿ ಮತ್ತು ಶಾಸಕಿ ನಯನಾ ಬ್ಯಾನರ್ಜಿ ಅವರನ್ನು ಆಹ್ವಾನಿಸಲಾಗುತ್ತಿದೆ. ರಾಜ್ಯಪಾಲರು ಮತ್ತು ಮೇಯರ್ ಅವರನ್ನೂ ಆಹ್ವಾನಿಸಲಾಗುವುದು ಎಂದು ಮೂಲಗಳು ತಿಳಿಸಿದೆ.
ಸೀಲ್ದಾಹ್‌ನಿಂದ ಸೆಕ್ಟರ್ 5ರವರೆಗಿನ ಮೆಟ್ರೋ ಜುಲೈ 11 ರ ಸೋಮವಾರದಂದು ಉದ್ಘಾಟನೆಗೊಳ್ಳಲಿದೆ. ಆದರೆ ನಾಳೆಯಿಂದಲೇ ಪ್ರಯಾಣಿಕರು ಮೆಟ್ರೋ ಬಳಸಲು ಸಾಧ್ಯವಾಗುವುದಿಲ್ಲ. ಮೆಟ್ರೋ ಪ್ರಯಾಣಕ್ಕೆ ಇನ್ನೂ ಮೂರು ದಿನ ಕಾಯಬೇಕಾಗುತ್ತದೆ. ಜುಲೈ 14ರ ಗುರುವಾರದಿಂದ ಈ ಮಾರ್ಗದಲ್ಲಿ ಮೆಟ್ರೋ ಪ್ರಯಾಣಿಕರ ಸೇವೆಗೆ ಅಣಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಮೆಟ್ರೋ ಉದ್ಘಾಟನೆಯ ಸುತ್ತ ರಾಜಕೀಯ ಒತ್ತಡ ಶುರುವಾಗಿದೆ. ಮಮತಾ ಬ್ಯಾನರ್ಜಿ ಅವರು ರೈಲ್ವೇ ಸಚಿವರಾಗಿದ್ದಾಗ ಈ ಮೆಟ್ರೋ ಯೋಜನೆಯನ್ನು ಆರಂಭಿಸಲಾಗಿತ್ತು ಎಂದು ತೃಣಮೂಲ ಹೇಳಿಕೊಂಡಿದೆ. ಇದಕ್ಕೂ ಮುನ್ನ ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳದ ಸಚಿವ ಮತ್ತು ಟಿಎಂಸಿಯ ಹಿರಿಯ ನಾಯಕ ಫಿರ್ಹಾದ್ ಹಕೀಮ್, ಕೇಂದ್ರ ಸರ್ಕಾರವು “ಪ್ರಜಾಪ್ರಭುತ್ವದ ತತ್ವಗಳನ್ನು ಪರಿಗಣಿಸುವುದಿಲ್ಲ” ಎಂದು ಆರೋಪಿಸಿದರು.
“ಪೂರ್ವ-ಪಶ್ಚಿಮ ಮೆಟ್ರೋ ಯೋಜನೆಯನ್ನು ರಾಜ್ಯ ಮತ್ತು ಕೇಂದ್ರದ ಪರಸ್ಪರ ಸಹಕಾರದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ಮುಖ್ಯಮಂತ್ರಿಯನ್ನು ಕೈಬಿಡುವ ಕ್ರಮವು ಸಂಕುಚಿತ ರಾಜಕೀಯ ಪರಿಗಣನೆಯಿಂದ ಉದ್ಭವಿಸಿದೆ” ಎಂದು ಅವರು ಹೇಳಿದರು. ಈ ಹೇಳಿಕೆಯ ಬಗ್ಗೆ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್, “ನಮ್ಮ ಯಾವುದೇ ಶಾಸಕರು ಮತ್ತು ಸಂಸದರಿಗೆ ಆಡಳಿತಾತ್ಮಕ ಸಭೆಗಳು ಸೇರಿದಂತೆ ಯಾವುದೇ ರಾಜ್ಯ ಕಾರ್ಯಕ್ರಮಗಳಿಗೆ ಆಹ್ವಾನ ನೀಡುವುದಿಲ್ಲ. ಸಿಎಂ ಕೂಡ ಆಹ್ವಾನ ನೀಡಿಲ್ಲ ಎಂದು ದೂರು ನೀಡಬಾರದು” ಎಂದು ಹೇಳಿದರು.