ಉಪೇಂದ್ರ ಅವರಿಗೆ ಸದ್ಯ ಬಿಗ್ ರಿಲೀಫ್ ಸಿಕ್ಕಿದೆ. ಹೈಕೋರ್ಟ್ ನಿಂದ ಎಫ್ಐಆರ್ ಗೆ ತಡೆ ನೀಡಲಾಗಿದೆ. ಉಪೇಂದ್ರ ವಿರುದ್ಧ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಮ್ಮ ವಿರುದ್ಧ ಹಾಕಲಾಗಿದ್ದ ಎಫ್ಐಆರ್ಗೆ ತಡೆ ನೀಡಬೇಕು ಎಂದು ಕೋರಿ ಉಪೇಂದ್ರ ಅವರು ಹೈಕೋರ್ಟ್ ಮೆಟ್ಟಿಲು ಏರಿದ್ದರು. ಈಗ ಅವರ ಪರವಾಗಿ ಕೋರ್ಟ್ ಆದೇಶ ನೀಡಿದೆ. ‘ಗಾದೆ ಮಾತು ಉಲ್ಲೇಖಿಸಿ ಉಪೇಂದ್ರ ಹೇಳಿಕೆ ನೀಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಇದಕ್ಕೆ ಅನ್ವಯವಾಗುವುದಿಲ್ಲ’ ಎಂದು ಉಪೇಂದ್ರ ಪರವಾಗಿ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡನೆ ಮಾಡಿದ್ದಾರೆ.
ಜಾತಿ ನಿಂದನೆ ಆರೋಪ ಎದುರಾದ ಬಳಿಕ ಉಪೇಂದ್ರ ಅವರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಕಿಡಿಕಾರಲು ಆರಂಭಿಸಿದರು. ಈಗ ಉಪೇಂದ್ರ ಅವರ ಮನೆಗೆ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ. ಬೆಂಗಳೂರಿನ ಕತ್ತರಿಗುಪ್ಪೆ ಮತ್ತು ಸದಾಶಿವ ನಗರದ ತಮ್ಮ ನಿವಾಸದಲ್ಲಿ ಉಪೇಂದ್ರ ಇಲ್ಲ ಎಂದು ಹೇಳಲಾಗುತ್ತಿದೆ. ಆದರೂ ಮುಂಜಾಗೃತ ಕ್ರಮವಾಗಿ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಇನ್ನು ಉಪೇಂದ್ರ ಅವರ ಹೇಳಿಕೆ ಕುರಿತು ಬೆಂಗಳೂರು ಯೂನಿವರ್ಸಿಟಿ ವಿದ್ಯಾರ್ಥಿಗಳು ಕೂಡ ಪ್ರತಿಭಟನೆ ನಡೆಸಿದ್ದಾರೆ.
ನಿನ್ನೆ ಉಪೇಂದ್ರ ಅವರು ಫೇಸ್ ಬುಕ್ ಲೈವ್ ನಲ್ಲಿ ಮಾತಾಡುವಾಗ ಗಾದೆ ಮಾತೊಂದನ್ನು ಹೇಳಿದ್ದರು. ಊರಿದ್ದ ಮೇಲೆ ಹೊಲಗೇರಿ ಇದ್ದೆ ಇರುತ್ತೆ ಎಂದಿದ್ದರು. ಇದರಿಂದ ಒಂದು ಸಮುದಾಯಕ್ಕೆ ಅವಹೇಳನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಉಪೇಂದ್ರ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಪ್ರತಿಭಟನೆಗಳು ಕೂಡ ನಡೆದಿತ್ತು. ಉಪೇಂದ್ರ ಅವರನ್ನು ಬಂಧಿಸಬೇಕೆಂದು ಒತ್ತಾಯ ಕೇಳಿ ಬಂದಿತ್ತು. ಇದೀಗ ಹೈಕೋರ್ಟ್ ನಿಂದ ಬಿಗ್ ರಿಲೀಫ್ ಸಿಕ್ಕಿದೆ.