ಹಾಸನ: ಈ ಬಾರಿಯ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಹೆಚ್ಚು ಸದ್ದು, ಸುದ್ದಿ ಮಾಡಿದ ಕ್ಷೇತ್ರ ಅಂದ್ರೆ ಅದು ಹಾಸನ ವಿಧಾನಸಭಾ ಕ್ಷೇತ್ರ. ಚುನಾವಣೆಗೂ ಮುನ್ನವೇ ನಾನೇ ಹಾಸನ ಅಭ್ಯರ್ಥಿ ಎಂದು ಅವರಿಗೆ ಅವರೇ ಘೋಷಣೆ ಮಾಡಿಕೊಂಡಿದ್ದರು. ಬಳಿಕ ದೊಡ್ಡ ರಾದ್ಧಾಂತ ರಂಪಾಟವೇ ಆಯ್ತು. ಕುಮಾರಸ್ವಾಮಿ ಮಾತ್ರ ಬಿಲ್ ಕುಲ್ ಒಪ್ಪಲೇ ಇಲ್ಲ. ಕಡೆಗೂ ಸ್ವರೂಪ್ ಪ್ರಕಾಶ್ ಅವರನ್ನೇ ಹಾಸನ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಯ್ತು. ಬಂಡಾಯವೇಳಬಹುದು ಎನ್ನುವಾಗಲೇ ಭವಾನಿ ರೇವಣ್ಣ ಅವರು ಸ್ವರೂಪ್ ಕೈಹಿಡಿದು ಬೆಂಬಲ ಸೂಚಿಸಿದ್ದಾರೆ.
ಇಂದು ಹಾಸನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿದ್ದ ಭವಾನಿ ರೇವಣ್ಣ, ಭಾಷಣದುದ್ಧಕ್ಕೂ ಸ್ವರೂಪ್ ಪ್ರಕಾಶ್ ಅವರಿಗೆ ನೀಡುವ ಬೆಂಬಲದ ಬಗ್ಗೆ ಮಾತನಾಡಿದ್ದಾರೆ. “ಸ್ವರೂಪ್ ಬೇರೆ ಅಲ್ಲ, ನನ್ನ ಮಕ್ಕಳು ಬೇರೆ ಅಲ್ಲ. ಹಿಂದೆ ಇದ್ದಂತ ವಿಚಾರಗಳನ್ನು ಮರೆಯಬೇಕು. ಚುನಾವಣೆಗೆ ಇನ್ನು ಇಪ್ಪತ್ತು ದಿನ ಮಾತ್ರ ಬಾಕಿ ಇದೆ.
ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡುತ್ತಿದ್ದೇನೆ. ಸ್ವರೂಪ್ ಗೆದ್ದೇ ಗೆಲ್ಲುತ್ತಾನೆ. ಹಾಸನದಲ್ಲಿ ಬಿಜೆಪಿಯನ್ನು ಸೋಲಿಸಲೆಬೇಕಿದೆ. ಈ ಬಾರಿ ಜೆಡಿಎಸ್ ಗೆಲ್ಲಿಸಲು ನಾವೂ ರೆಡಿ ಎಂದು ಸ್ವರೂಪ್ ಪ್ರಕಾಶ್ ಅವರ ಕೈಹಿಡಿದು ಮೇಲಕ್ಕೆ ಎತ್ತಿದ್ದಾರೆ.