ಚಿತ್ರದುರ್ಗ, (ಸೆ.21) : ಕಾಂಗ್ರೆಸ್ ಯುವ ನೇತಾರ ರಾಹುಲ್‍ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಪಾದಯಾತ್ರೆ ಕೈಗೊಂಡಿದ್ದು, ಮುಂದಿನ ತಿಂಗಳು ಹಿರಿಯೂರು ಮೂಲಕ ಚಿತ್ರದುರ್ಗ ಜಿಲ್ಲೆಗೆ ಆಗಮಿಸಲಿರುವುದರಿಂದ ಪೂರ್ವಸಿದ್ದತೆ ಕುರಿತು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪರಿಶಿಷ್ಟ ಜಾತಿ ವಿಭಾಗ ಜಿಲ್ಲಾಧ್ಯಕ್ಷ ಎಸ್.ಜಯಣ್ಣ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು.
ಪೂರ್ವಭಾವಿ ಸಭೆಗೆ ವೀಕ್ಷಕರಾಗಿ ಆಗಮಿಸಿದ್ದ ತಿಮ್ಮಪ್ಪ ಮಾತನಾಡಿ ರಾಹುಲ್‍ಗಾಂಧಿರವರು ಕೈಗೊಂಡಿರುವ ಭಾರತ್ ಜೋಡೋ ಪಾದಾಯತ್ರೆಯುದ್ದಕ್ಕೂ ದೇಶದ ರೈತರು, ಮಹಿಳೆಯರು, ಕಾರ್ಮಿಕರು, ವಿದ್ಯಾರ್ಥಿಗಳು, ನಿರುದ್ಯೋಗಿಗಳ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ದುರಾಡಳಿತದಿಂದ ಬೇಸತ್ತಿರುವ ಜನರನ್ನು ಜಾಗೃತಿಗೊಳಿಸುವುದಕ್ಕಾಗಿ ನಡೆಯುತ್ತಿರುವ ಪಾದಯಾತ್ರೆ ಹಿರಿಯೂರು ಮೂಲಕ ಚಳ್ಳಕೆರೆ, ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ತೆಲಂಗಾಣ ತಲುಪಲಿದೆ. ಅದಕ್ಕಾಗಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದಿಂದ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.
ಶಿವಣ್ಣ ಮಾತನಾಡಿ ಕೇಂದ್ರದಲ್ಲಿ ಎರಡನೆ ಬಾರಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರಮೋದಿ ಚುನಾವಣಾ ಪೂರ್ವದಲ್ಲಿ ದೇಶದ ಜನರಿಗೆ ನೀಡಿದ್ದ ಯಾವ ಭರವಸೆಯನ್ನು ಈಡೇರಿಸಿಲ್ಲ. ಬದಲಾಗಿ ಅಗತ್ಯ ವಸ್ತುಗಳ ಬೆಲೆ ಏರಿಸಿ ಬಡವರನ್ನು ತತ್ತರಿಸುವಂತೆ ಮಾಡಿದ್ದಾರೆ. ಅದಕ್ಕಾಗಿ ಕೋಮುವಾದಿ ಬಿಜೆಪಿ.ಸರ್ಕಾರದ ವೈಫಲ್ಯವನ್ನು ರಾಹುಲ್‍ಗಾಂಧಿ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಜನರಿಗೆ ಮುಟ್ಟಿಸಲಿದ್ದಾರೆ ಎಂದರು.
ವೀಕ್ಷಕ ಮಲ್ಲೇಶಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಕಾಂಗ್ರೆಸ್ ಎಸ್.ಟಿ.ಸೆಲ್ ಅಧ್ಯಕ್ಷ ಹೆಚ್.ಅಂಜಿನಪ್ಪ, ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾಪರ್ಪ, ಬಿ.ಟಿ.ಜಗದೀಶ್, ಕೆ.ಪಿ.ಸಂಪತ್‍ಕುಮಾರ್, ಹಿಂದುಳಿದ ವರ್ಗಗಳ ಅಧ್ಯಕ್ಷ ಎನ್.ಡಿ.ಕುಮಾರ್, ಕಾಂಗ್ರೆಸ್ ಉಪಾಧ್ಯಕ್ಷ ಜಿ.ಎಸ್.ಕುಮಾರ್‍ಗೌಡ, ದುರುಗೇಶ್ ಪೂಜಾರ್, ಗುರು, ಜೆ.ಪ್ರಕಾಶ್, ಕಲ್ಲೇಶ್, ನಾಗರಾಜ, ಸತೀಶ್, ಅಣ್ಣಪ್ಪ, ಮುಖೇಶ್, ಜಗದೀಶ್, ಮರುಳಾರಾಧ್ಯ, ಎಸ್.ಸಿ.ವಿಭಾಗದ ಪದಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದರು.