ಚಿತ್ರದುರ್ಗ. ಮೇ.04: ಜೀವನದಲ್ಲಿ ಎಂತಹದು ಕಷ್ಟ ಎದುರಾದರು ಛಲ ಬಿಡದೆ, ಸತತ ಪ್ರಯತ್ನದಿಂದ ಸಾಧನೆ ಮಾಡುವುದಕ್ಕೆ ಮಹರ್ಷಿ ಭಗೀರಥರು ಪ್ರೇರಣೆಯಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರ ಸಭೆ ಸಹಯೋಗದಲ್ಲಿ, ಭಾನುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಗೀರಥರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಪ್ರಯತ್ನ ಹಾಗೂ ಸಾಧನೆಯ ದ್ಯೋತಕವಾದ ಭಗೀರಥ ಮಹರ್ಷಿಯ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ಸಮಾಜದಲ್ಲಿ ಇಂದಿಗೂ ಕಠಿಣ ಪರಿಶ್ರಮಕ್ಕೆ ಭಗೀರಥ ಯತ್ನ ಎಂದು ಕರೆಯಲಾಗುತ್ತದೆ. ಭಗೀರಥರು ಎಂದರೆ ಪ್ರಯತ್ನದ ಸಾಧನೆಯ ದ್ಯೋತಕವಾಗಿದ್ದು, ಸಾಕ್ಷತ್ ಗಂಗೆಯನ್ನು ಧರೆಗಿಳಿಸಿದ ಮಹಾಪುರುಷರು ಎಂದು ಬಣ್ಣಿಸಿದರು.
ಉಪ್ಪಾರ ಸಮಾಜದವರು ಶ್ರಮಜೀವಿಗಳಾಗಿದ್ದು, ಸಂಘಟನೆ ಜತೆಗೆ ಶೈಕ್ಷಣಿಕ ಕ್ಷೇತ್ರದಲ್ಲೂ ಸಾಕಷ್ಟು ಸಾಧನೆ ಮಾಡುತ್ತಿದ್ದಾರೆ. ಹಲವು ಜನರು ಸರ್ಕಾರ ಉನ್ನತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರ ಉಪ್ಪಾರ ಸಮಾಜವನ್ನು ಪ್ರವರ್ಗ-1 ಅಡಿ ಪರಿಗಣಿಸಿ ಸಾಕಷ್ಟು ಸಲವತ್ತುಗಳನ್ನು ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಿದೆ. ಎಲ್ಲರೂ ಮಕ್ಕಳ ಶೈಕ್ಷಣಿಕ ಸಾಧನೆಗೆ ಇಂಬು ನೀಡಿದರೆ, ಮಕ್ಕಳು ಸಹ ಭಗೀರಥರಂತೆ ಸಾಧನೆ ಮಾಡುತ್ತಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಿವೃತ್ತ ಡಿವೈಸ್ಪಿ ನಾಗರಾಜ್ ಮಹರ್ಷಿ ಭಗೀರಥರ ಕುರಿತು ಉಪನ್ಯಾಸ ನೀಡಿದರು. ನಿವೃತ್ತ ಶಿಕ್ಷಕ ವೆಂಕಟೇಶ್ ಪ್ರಾರ್ಥಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್ ಸ್ವಾಗತಿಸಿದರು. ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಕಾರ್ಯಕ್ರಮ ನಿರೂಪಿಸಿ, ನಾಡಗೀತೆ ಹಾಗೂ ವಚನ ಗಾಯನ ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ, ಭಗೀರಥ ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ಎನ್.ವೀರೇಶ್, ಪ್ರಧಾನ ಕಾರ್ಯದರ್ಶಿ ಎಲ್.ಮಹೇಶ್, ಖಜಾಂಚಿ ಹೆಚ್.ಅಜ್ಜಪ್ಪ, ಸೇರಿದಂತೆ ಆರ್.ಮೂರ್ತಿ, ದೇವರಾಜ್, ಅಜ್ಜಯ್ಯ, ಎನ್.ತಿಪ್ಪೇಸ್ವಾಮಿ, ಈಶ್ವರ, ವಕೀಲರಾದ ಜಗದೀಶ್, ಜಗನ್ನಾಥ್ ಸೇರಿದಂತೆ ಉಪ್ಪಾರ ಸಮಾಜದ ಇತರೆ ಮುಖಂಡರು ಇದ್ದರು.
ಪೋಟೋ ವಿವರ: ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಗೀರಥರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಪುಷ್ಪ ನಮನ ಸಲ್ಲಿಸಿದರು.
