ಭದ್ರಾ ಮೇಲ್ದಂಡೆ ಯೋಜನೆ : ಕಡೆಯ ಭಾಗದ ತಾಲ್ಲೂಕುಗಳಿಗೆ ಅನ್ಯಾಯವಾಗದಿರಲಿ : ಬೆಳಗಾವಿ ಅಧಿವೇಶನದಲ್ಲಿ ಶಾಸಕ ಟಿ.ರಘುಮೂರ್ತಿ ಹೇಳಿಕೆ

2 Min Read

ಬೆಳಗಾವಿ ಸುವರ್ಣಸೌಧ, ಡಿ.14 : ಭದ್ರಾ ಮೇಲ್ದಂಡೆ ಯೋಜನೆ ಘೋಷಣೆಯಾಗಿ 20 ವರ್ಷವಾಗುತ್ತಾ ಬಂದಿದೆ. ಇದರ ನಡುವೆ ಯೋಜನೆಯ ಮೇಲ್ಭಾಗದ ಪ್ರದೇಶದಲ್ಲಿ ಪರಿಷ್ಕøತ ಯೋಜನೆಗಳನ್ನು ಸೇರಿಸಿ, ಕೆರೆಗಳಿಗೆ ನೀರು ತುಂಬಿಸುವ ಹಾಗೂ ನೀರಾವರಿ ಯೋಜನೆಗಳನ್ನು ವಿಸ್ತರಿಸುತ್ತಿದ್ದಾರೆ. ಇದರಿಂದಾಗಿ ಕಡೆಯ ಭಾಗದ ತಾಲ್ಲೂಕುಗಳಿಗೆ ಅನ್ಯಾಯವಾಗುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಕಳವಳ ವ್ಯಕ್ತಪಡಿಸಿದರು.

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಗುರುವಾರ ವಿಧಾನ ಸಭೆಯ ಚರ್ಚೆಯ ವೇಳೆ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಹಾಗೂ ಜಲಸಂಪನ್ಮೂಲ ಸಚಿವರು ಈ ಯೋಜನೆಗಳಿಗೆ ಮಿತಿ ನಿಗದಿ ಮಾಡಿ, ಶತ ಶತಮಾನಗಳಿಂದ ವಂಚಿತವಾಗಿರುವ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳಿಗೆ ನ್ಯಾಯ ಒದಗಿಸಬೇಕು. ಆರಂಭದಲ್ಲಿ ರೂ.2,500 ಕೋಟಿ ಇದ್ದ ಭದ್ರಾ ಮೇಲ್ದಂಡೆ ಯೋಜನೆ ವೆಚ್ಚೆ ಇಂದು ರೂ.21,000 ಕೋಟಿಗೆ ಏರಿಕೆಯಾಗಿದೆ. ಇದುವರೆಗೂ ರೂ.7,500 ಕೋಟಿ ವೆಚ್ಚವಾಗಿದೆ. ಆದರೂ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳಿಗೆ ಯೋಜನೆ ಲಾಭವಾಗಿಲ್ಲ.

ಭದ್ರಾ ಮೇಲ್ದಂಡೆ ಯೋಜನೆಯ ಆಧರಿಸಿ ಕ್ಷೇತ್ರದ 2,25,151 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಇದೇ ಯೋಜನೆಯಲ್ಲಿ ಕ್ಷೇತ್ರದ 367 ಕೆರೆಗಳಿಗೆ ನೀರು ತುಂಬಿಸಲಾಗುವುದು.

ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಭದ್ರಾ ಮೆಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ರೂ.5300 ಕೋಟಿ ಅನುದಾನ ಮೀಸಲು ಇರಿಸಿದೆ. ಇದುವರೆಗೂ ಈ ಅನುದಾನ ಹಣ ರಾಜ್ಯ ಸರ್ಕಾರಕ್ಕೆ ಬಿಡುಗಡೆಯಾಗಿಲ್ಲ. ಕೇಂದ್ರ ಅನುದಾನ ದೊರಕಿದರೆ ಯೋಜನೆ ಕಾಮಗಾರಿಗೆ ವೇಗ ದೊರಯಲಿದೆ ಎಂದು ಅಭಿಪ್ರಾಯಪಟ್ಟರು.

ರೂ. 50 ಕೋಟಿ ವಿಶೇಷ ಅನುದಾನಕ್ಕೆ ಬೇಡಿಕೆ:  2019-20ರ ಆಯವ್ಯಯದಲ್ಲಿ ರಾಜ್ಯ ಸರ್ಕಾರ ಚಳ್ಳಕೆರೆ, ಮೊಳಕಾಲ್ಮೂರು, ಶಿರಾ, ಪಾವಗಡ ಹಾಗೂ ಮಧುಗಿರಿ ತಾಲ್ಲೂಕುಗಳ ಅಭಿವೃದ್ಧಿ ರೂ.50 ಕೋಟಿ ವಿಶೇಷ ಅನುದಾನ ನೀಡಿತ್ತು. ಆದರೆ ಮುಂದೆ ಬಂದ ಸರ್ಕಾರಗಳು ಅನುದಾನವನ್ನು ತಡೆ ಹಿಡಿದಿವೆ. ಕೂಡಲೇ ಈ ಅನುದಾನವನ್ನು ಒದಗಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಆಗ್ರಹಿಸಿದರು.

ಶೇಂಗಾ ಬೆಳೆಗೆ ವಿಶೇಷ ಪ್ಯಾಕೇಜ್ ಘೋಷಿಸಿ: ಚಳ್ಳಕೆರೆ ತಾಲ್ಲೂಕಿನಲ್ಲಿ ಈ ಬಾರಿ ಸಂಪೂರ್ಣ ಬರ ಆವರಿಸಿದೆ. ಒಟ್ಟು 85,680 ಹೆಕ್ಟೇರ್ ಕೃಷಿ ಭೂಮಿಯಲ್ಲಿ 72,650 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯುತ್ತಾರೆ. ಈ ಬಾರಿ ಬೆಳೆ ಸಂಪೂರ್ಣ ಹಾಳಗಿದ್ದು, ಸರ್ಕಾರ ಶೇಂಗಾ ಬೆಳೆಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ  ಪರುಶುರಾಂಪುರವನ್ನು ತಾಲ್ಲೂಕು ಕೇಂದ್ರವಾಗಿ ಮಾಡಬೇಕು. ಚಳ್ಳಕೆರೆ ನಗರದಲ್ಲಿ ಯುಜಿಡಿ ನಿರ್ಮಾಣಕ್ಕೆ ಅನುದಾನ ನೀಡಬೇಕು. ತಾಲ್ಲೂಕಿ ಪ್ರತಿ ಹೋಬಳಿಯಲ್ಲೂ ಗೋಶಾಲೆ ತರೆಯಲು ಅನುಮತಿಸಿ ಸಹಾಯ ಒದಗಿಸಬೆಕು. ಅರೆ ಅಲೆಮಾರಿ ಹಾಗೂ ಅಲೆಮಾರಿ ಜನಾಂಗವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳನ್ನು ಮಂಜೂರು ಮಾಡುವಂತೆ ಶಾಸಕ ಟಿ.ರಘುಮೂರ್ತಿ ಕೋರಿದರು.

ಬರಗಾಲದ ಪರಿಹಾರ ಮೊತ್ತವನ್ನು ಸ್ವಯಂಚಾಲಿತವಾಗಿ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲು ಕಂದಾಯ ಸಚಿವ ಕೃಷ್ಣಭೈರೇಗೌಡ ಚಳ್ಳಕೆರೆ ತಾಲ್ಲೂಕು ಆಯ್ಕೆ ಮಾಡಿಕೊಂಡಿದ್ದಕ್ಕೆ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು.

Share This Article
Leave a Comment

Leave a Reply

Your email address will not be published. Required fields are marked *