ಬೆಂಗಳೂರು: ಈ ಸೈಬರ್ ಕ್ರೈಂ ವಂಚಕರು ಯಾವಾಗ, ಯಾವ ಟ್ರಿಕ್ಸ್ ಬಳಕೆ ಮಾಡುತ್ತಾರೆ ಎಂಬುದು ಗೊತ್ತಾಗಲ್ಲ. ಒಂದಷ್ಟು ಜನ ಮೋಸ ಹೋಗಿ ಇನ್ನೇನು ಎಚ್ಚರಗೊಂಡಿದ್ದಾರೆ ಎನ್ನುವಷ್ಟರಲ್ಲೇ ಹಿಸ ಟ್ರಿಕ್ಸ್ ಬಳಕೆ ಮಾಡಿಕೊಳ್ಳುತ್ತಾರೆ. ಪೊಲೀಸರು ಕೂಡ ಎಷ್ಟೇ ಎಚ್ಚರಿಕೆಯನ್ನು ನೀಡಿದರು ಸಹ ಮೋಸ ಹೋಗುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಇದೀಗ ಹೊಸ ಆಯಾಮದಲ್ಲಿ ಸೈಬರ್ ಕ್ರೈಂ ಶುರುವಾಗಿದೆ. ಅದರಲ್ಲೂ ನಿಮ್ಮ ಮಕ್ಕಳ ವಿಚಾರವನ್ನೇ ತೆಗೆದು ಸೈಬರ್ ಕ್ರೈಂ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಪೊಲೀಸರೇ ಇದರಿಂದ ಮೋಸ ಹೋಗಿರುವುದು ವಿಪರ್ಯಾಸ. ಇದೀಗ ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಅವರೇ ಜನರಿಗೆಲ್ಲಾ ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾರೆ.
ಈಗಾಗಲೇ ರಾಜ್ಯ ರಾಜಧಾನಿಯಲ್ಲಿ ಇದಕ್ಕೆ ಸಂಬಂಧಿಸಿದ ಕೇಸುಗಳು ದಾಖಲಾಗುತ್ತಿವೆ. ಪಾಕಿಸ್ತಾನದ ನಂಬರ್ ನಿಂದ ಮಕ್ಕಳ ಹೆಸರೇಳಿ ಕರೆ ಮಾಡುತ್ತಿದ್ದಾರೆ. 923165788678 ಈ ಸಂಖ್ಯೆಯಿಂದ ವಾಟ್ಸಾಪ್ ಕರೆ ಮಾಡುತ್ತಿದ್ದಾರೆ. ಇದೇ ವಾಟ್ಸಾಪ್ ಸಂಖ್ಯೆಗೆ ಪ್ರವೀಣ್ ಸೂದ್ ಅವರ ಫೋಟೋ ಅಟ್ಯಾಚ್ ಮಾಡಿ ಮೋಸ ಮಾಡುತ್ತಿದ್ದಾರೆ. ಸಿಬಿಐ ಪೊಲೀಸರೇ ಕರೆ ಮಾಡುತ್ತಿದ್ದಾರೆ ಎಂಬಂತೆ ನಂಬಿಸುತ್ತಿದ್ದಾರೆ. ಇದರಿಂದ ಅದೆಷ್ಟೋ ಪೋಷಕರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ.
ನಿನ್ನೆ ಅಂದ್ರೆ ಬುಧವಾರ ಉದ್ಯೋಗಿ ಮಹಿಳೆಗೆ ಕರೆ ಮಾಡಿ, ನಿಮ್ಮ ಮಗನನ್ನು ಸಿಬಿಐ ಪೊಲೀಸರು ಬಂಧಿಸಿದ್ದಾರೆ. ಮಗನನ್ನು ಬಿಡಿಸಲು ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಕರೆ ಕಟ್ ಮಾಡಬೇಡಿ ಎಂದು ಹೇಳಿದ್ದಾರೆ. ಆ ಮಹಿಳೆ ಗಾಬರಿಯಾಗಿ ಮಗನಿಗೆ ಕರೆ ಮಾಡಿದ್ದಾರೆ. ಮಗ ಕ್ಲಾಸ್ ನಲ್ಲಿದ್ದೀನಿ ಎಂದಾಗ ತಾಯಿ ಸಮಾಧಾನವಾಗಿದ್ದಾರೆ. ತಕ್ಷಣ ಈ ಸಂಬಂಧ ವಿವೇಕ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ವಿಪರ್ಯಾಸವೆಂದರೆ ವಿವೇಕ ನಗರ ಪೊಲೀಸ್ ಠಾಣೆಯ ಪೊಲೀಸರೊಬ್ಬರು ಇಂಥದ್ದೇ ಕರೆ ಸ್ವೀಕರಿಸಿ ಮೋಸ ಹೋಗಿದ್ದಾರೆ. 5 ಸಾವಿರ ಹಣ ಕಳೆದುಕೊಂಡಿದ್ದಾರೆ. ಹೀಗಾಗಿ ಜನತೆಗೆ ವಾಟ್ಸಾಪ್ ಕರೆಯಿಂದ ಎಚ್ಚರದಿಂದ ಇರಲು ಸೂಚನೆ ನೀಡಲಾಗಿದೆ.