ಚಿಕ್ಕಬಳ್ಳಾಪುರ: ವೀಕೆಂಡ್ ಫ್ಲ್ಯಾನ್ ನಲ್ಲಿ ನಂದಿ ಬೆಟ್ಟ ಕೂಡ ಒಂದು. ಬೆಂಗಳೂರು ಸುತ್ತಮುತ್ತಲಿನವರು ನಂದಿಬೆಟ್ಟಕ್ಕೇನೆ ಮೊದಲು ಫ್ಲ್ಯಾನ್ ಮಾಡೋದು. ಆದ್ರೆ ಪ್ರವಾಸಿಗರ ಭಾರೀ ಬೇಡಿಕೆ ಇರುವ ನಂದಿ ಬೆಟ್ಟಕ್ಕೆ ಕೆಲವು ತಿಂಗಳಿಂದ ಪ್ರವೇಶ ನಿರ್ಬಂಧಿಸಲಾಗಿತ್ತು. ಇದೀಗ ಮುಕ್ತ ಅವಕಾಶ ಸಿಕ್ಕಿದ್ದು, ಮತ್ತೆ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.
ಆಗಸ್ಟ್ ತಿಂಗಳಲ್ಲಿ ಸುರಿದ ಬಾರೀ ಮಳೆಯಿಂದಾಗಿ ನಂದಿಬೆಟ್ಟದ ಬ್ರಹ್ಮಗಿರಿ ಬೆಟ್ಟದಲ್ಲಿ ಕುಸಿತ ಉಂಟಾಗಿತ್ತು. ಇದರ ಪರಿಣಾಮ ನಂದಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿ ಹೋಗಿತ್ತು. ಹೀಗಾಗಿ ನಂದಿ ಬೆಟ್ಟಕ್ಕೆ ನಿರ್ಬಂಧ ಹೇರಲಾಗಿತ್ತು. ಅದೆಷ್ಟೋ ಪ್ರವಾಸಿಗರು ಬೆಟ್ಟದವರೆಗೂ ಬಂದು ವಾಪಾಸ್ಸಾಗಿದ್ದರು. ಇದೀಗ ರಸ್ತೆಯೆಲ್ಲವೂ ಸರಿಯಾಗಿದ್ದು, ಒಂದು ವಾರದಲ್ಲೇ ನಂದಿ ಬೆಟ್ಟಕ್ಕೆ ಮತ್ತೆ ಸಾರ್ವಜನಿಕರ ಪ್ರವೇಶಕ್ಕೆ ದಾರಿ ಸಿಗಲಿದೆ.
ರಾಜ್ಯ ಸರ್ಕಾರ 80 ಲಕ್ಷ ರೂ. ವೆಚ್ಚ ಮಾಡಿ, ಕೊಚ್ಚಿ ಹೋದ ರಸ್ತೆಯ ಮರು ನಿರ್ಮಾಣ ಕಾರ್ಯ ಮಾಡಿದೆ. 40 ಮೀಟರ್ ಉದ್ದದ ರಸ್ತೆಗೆ, ಭದ್ರವಾದ ಸಿಮೆಂಟ್ ಕಾಂಕ್ರೀಟ್ ಸೇತುವೆ ನಿರ್ಮಾಣ ಮಾಡಲಾಗಿದ್ದು, ಬೆಟ್ಟದಿಂದ ಬರುವ ನೀರು ಸರಾಗವಾಗಿ ಹರಿದು ಹೋಗಲು ಬೃಹತ್ ಗಾತ್ರದ ಪೈಪ್ಗಳನ್ನು ಅಳವಡಿಸಲಾಗಿದೆ. ಇನ್ನೇನು ಬಹುತೇಕ ರಸ್ತೆ ಕಾಮಗಾರಿ ಮುಗಿದಿದ್ದು, ತಡೆಗೋಡೆಗಳ ನಿರ್ಮಾಣ ಕಾರ್ಯ ಮಾತ್ರ ಬಾಕಿ ಇದೆ. ಎಲ್ಲಾ ಅಂದುಕೊಂಡಂತೆ ಆದರೆ, ಇನ್ನೊಂದು ವಾರದಲ್ಲಿ ರಸ್ತೆ ಉದ್ಘಾಟನೆ ಆಗಲಿದೆ.