ಬೆಂಗಳೂರು: ಶಾಲೆ ಮಕ್ಕಳ ಮುಂದಿನ ಉಜ್ವಲ ಭವಿಷ್ಯಕ್ಕೆ ಬುನಾದಿ. ಮಕ್ಕಳ ಆಟಪಾಠ ಎಲ್ಲವನ್ನು ಸರಿಯಾದ ಮಾರ್ಗದಲ್ಲಿ ಕಲಿಸಿಕೊಡುತ್ತದೆ ಶಾಲೆ. ಅಲ್ಲಿನ ಶಿಕ್ಷಕರು ಕೂಡ ಮಕ್ಕಳಿಗೆ ಎರಡನೇ ಪೋಷಕರು. ಗುರುವೆಂದರೆ ದೇವರಿಗೆ ಸಮಾನ. ಆದ್ರೆ ಆ ಗುರುಗಳೇ ಕಾಮುಕರಾದರೆ..? ಬೇಲಿಯೇ ಎದ್ದು ಜೊಲ ಮೇಯ್ದಂತೆಯೇ ಸರಿ. ಇಂಥ ಕ್ರೂರ ಕೃತ್ಯ ನಡೆದಿರೋದು ಬೆಂಗಳೂರಿನ ವರ್ತೂರಿನಲ್ಲಿರುವ ಖಾಸಗಿ ಶಾಲೆಯಲ್ಲಿ. 10 ವರ್ಷದ ಬಾಲಕಿ ಮೇಲೆ ಪ್ರಾಂಶುಪಾಲ ಅತ್ಯಾಚಾರ ಎಸಗಿದ್ದ. ಇದೀಗ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಗೆ ಬೀಗ ಹಾಕಲಾಗಿದೆ.
ಬಿಇಒ ಈ ಆದೇಶ ಹೊರಡಿಸಿದ್ದಾರೆ. ಶಾಲೆ ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. ಇನ್ನು ಅತ್ಯಾಚಾರದ ಆರೋಪಿ ಈ ಶಾಲೆಯನ್ನು ಕೋರಮಂಗಲದಲ್ಲಿ ತೆರೆಯಲು ಅನುಮತಿ ಕೇಳಿದ್ದ. ಆದ್ರೆ ವರ್ತೂರಿನಲ್ಲಿ ಅನಧಿಕೃತವಾಗಿ ತೆರೆದಿದ್ದ. ಹೀಗಾಗಿ ಶಾಲೆಗೆ ಬೀಗ ಹಾಕಿಸಲಾಗಿದೆ.
ಆದ್ರೆ ಈ ಶಾಲೆಯಲ್ಲಿ ಸುಮಾರು 140ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಹೀಗಾಗಿ ಮಕ್ಕಳ ಭವಿಷ್ಯ ಅತಂತ್ರವಾಗಿದೆ. ಈ ಮಧ್ಯೇ ಕ್ಷೇತ್ರ ಶಿಕ್ಷಣಾಧಿಕಾರಿಯೇ ಮಕ್ಕಳ ಭವಿಷ್ಯಕ್ಕೆ ಬೇರೆ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ. ಬೇರೆ ಶಾಲೆಯಲ್ಲಿ ಮಕ್ಕಳಿಗೆ ಅಡ್ಮಿಷನ್ ಕೊಡಿಸಲು ನಿರ್ಧಾರ ಮಾಡಿದ್ದಾರೆ. ಆದ್ರೆ ಈಗಾಗಲೇ ಅರ್ಧ ಶೈಕ್ಷಣಿಕ ವರ್ಷ ಕಳೆದು ಆಗಿದೆ. ಈಗ ಬೇರೆ ಶಾಲೆಗೆ ಸೇರಿಸಿದರೆ ಮಕ್ಕಳ ಭವಿಷ್ಯ ಏನಾಗಲಿದೆ ಅನ್ನೋದು ಪೋಷಕರ ಆತಂಕವಾಗಿದೆ.