ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ ಎಂಬ ಗಾದೆ ಮಾತಿದೆ. ಅಂದ್ರೆ ಕಾಪಾಡಬೇಕಾದವರೆ ಕಳ್ಳತನಕ್ಕಿಳಿದರೆ ಎಂಬ ಅರ್ಥ. ಈ ಮಾತು ಈಗ ಅಕ್ಷರಶಃ ಹೋಲಿಕೆಯಾಗುವ ಕಥೆಯೊಂದು ನಡೆದಿದೆ. ರಕ್ಷಣೆ ಕೊಡಬೇಕಾದ ಪೊಲೀಸಪ್ಪನೇ ಕಳ್ಳತನಕ್ಕೆ ಇಳಿದಿರೋ ಘಟನೆ ಬೆಳಕಿಗೆ ಬಂದಿದೆ.
ಈ ರೀತಿ ತನ್ನ ವೃತ್ತಿ ಏನು ಎಂಬುದನ್ನೇ ಮರೆತು ಕಳ್ಳತನದ ದಾರಿ ಹಿಡಿದವರು ಕಾನ್ಸ್‌ಟೇಬಲ್ ಹೊನ್ನಪ್ಪ ಅಲಿಯಾಸ್ ರವಿ. ಈತ ವಿದ್ಯಾರಣ್ಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದನಂತೆ. ಈಗ ಒಒಡಿ ಮೇಲೆ ಐಪಿಎಸ್ ಅಧಿಕಾರಿಯೊಬ್ಬರ ಕಾರ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದ.
ಅಪ್ರಾಪ್ತ ಹುಡುಗರನ್ನ ಬಳಸಿಕೊಂಡು ಈತ ಬೈಕ್ ಗಳನ್ನ ಕಳ್ಳತನ ಮಾಡಿಸುತ್ತಿದ್ದ. ಬೆಂಗಳೂರು, ಹಾವೇರಿ, ರಾಣೆಬೆನ್ನೂರು ಸೇರಿದಂತೆ ಹಲವು ಕಡೆ ಬೈಕ್ ಗಳನ್ನ ಕಳ್ಳತನ ಮಾಡಿಸಿ ಈತನೇ ಮಾರಾಟ ಮಾಡುತ್ತಿದ್ದನಂತೆ. ಬಂದ ಹಣದಿಂದ ಹುಡುಗರಿಗೆ ಐದಾರು ಸಾವಿರ ಕೊಟ್ಟು ಸುಮ್ಮನಾಗುತ್ತಿದ್ದನಂತೆ.
ಇದೀಗ ಪೊಲೀಸರ ಕೈಗೆ ಪೊಲೀಸಪ್ಪನೇ ಸಿಕ್ಕಿಬಿದ್ದಿದ್ದಾನೆ. ಮಾರಾಟ ಮಾಡಿದ್ದ 53 ಬೈಕ್ ಗಳ ವಶಕ್ಕೆ ಪಡೆದಿದ್ದು, ಈತ ಮತ್ತು ಬೈಕ್ ಕದಿಯುತ್ತಿದ್ದ ಇಬ್ಬರನ್ನ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.