Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬೆಂಗಳೂರು : ವೃದ್ಧೆಗೆ ‘ಡಿಜಿಟಲ್ ಅರೆಸ್ಟ್’ ಭೀತಿ ಒಡ್ಡಿ ₹24 ಕೋಟಿ ದೋಚಿದ ಖದೀಮರು : ಐವರು ಅಂತರರಾಜ್ಯ ವಂಚಕರು ಸಿಸಿಬಿ ಬಲೆಗೆ!

---Advertisement---

ಸುದ್ದಿಒನ್,ಬೆಂಗಳೂರು,ಮೇ.24: ಬೆಂಗಳೂರಿನಲ್ಲಿ ಸೈಬರ್ ಅಪರಾಧಿಗಳ ಕೈಚಳಕ ಮಿತಿಮೀರಿದ್ದು, ಹಿರಿಯ ನಾಗರಿಕರೇ ಇವರ ಪ್ರಮುಖ ಟಾರ್ಗೆಟ್ ಆಗುತ್ತಿದ್ದಾರೆ. ಇತ್ತೀಚೆಗೆ ಐಟಿ ಸಿಟಿಯಲ್ಲಿ ಇಡೀ ದೇಶವೇ ಬೆಚ್ಚಿಬೀಳುವಂತಹ ಭೀಕರ ಸೈಬರ್ ದರೋಡೆ ನಡೆದಿದೆ. ವೃದ್ಧೆಯೊಬ್ಬರನ್ನು ಹೆದರಿಸಿ, ಬೆದರಿಸಿ ಬರೋಬ್ಬರಿ 24 ಕೋಟಿ ರೂಪಾಯಿ ಪಂಗನಾಮ ಹಾಕಿದ್ದ ಅಂತರರಾಜ್ಯ ಗ್ಯಾಂಗ್ ಅನ್ನು ಬೆಂಗಳೂರು ಸಿಸಿಬಿ (CCB) ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೇಟೆಯಾಡಿದ್ದಾರೆ.

ದೆಹಲಿ, ಮುಂಬೈ ಹಾಗೂ ಅಲಹಾಬಾದ್ ಮೂಲದ ಗೌರವ್ ಕುಮಾರ್, ಓಂ ಪ್ರಕಾಶ್ ಸೇರಿದಂತೆ ಒಟ್ಟು ಐವರು ಸೈಬರ್ ವಂಚಕರನ್ನು ಪೊಲೀಸರು ಸದ್ಯ ಕಂಬಿ ಹಿಂದೆ ತಳ್ಳಿದ್ದಾರೆ. ಶಿವಾಜಿನಗರದ ನಿವಾಸಿಯಾದ ಲಕ್ಷ್ಮೀ ನಾರಾಯಣ್ ಎಂಬ ವೃದ್ಧೆಯೇ ಈ ಕೋಟಿ ಕೋಟಿ ವಂಚನೆಗೆ ಬಲಿಯಾದ ದುರ್ದೈವಿ. ಕಳೆದ ಜನವರಿ ತಿಂಗಳಿನಿಂದಲೇ ಈ ಖದೀಮರ ಗ್ಯಾಂಗ್ ವೃದ್ಧೆಯನ್ನು ಟಾರ್ಗೆಟ್ ಮಾಡಿತ್ತು. “ನೀವು ಕಾನೂನು ಬಾಹಿರ ಚಟುವಟಿಕೆ ಮಾಡಿದ್ದೀರಿ, ನಿಮ್ಮ ಮೇಲೆ ಕೇಸ್ ಆಗಿದೆ” ಎಂದು ಸುಳ್ಳು ಹೇಳಿ ಬೆದರಿಸಿದ್ದ ಸೈಬರ್ ಕಳ್ಳರು, ವೃದ್ಧೆಯನ್ನು ಮನೆಯಿಂದ ಹೊರಬಾರದಂತೆ ‘ಡಿಜಿಟಲ್ ಅರೆಸ್ಟ್’ ಮಾಡಿದ್ದರು. ಜೈಲಿಗೆ ಹೋಗುವ ಭಯದಲ್ಲಿದ್ದ ವೃದ್ಧೆಯನ್ನು ಹೆದರಿಸಿಯೇ ಹಂತ ಹಂತವಾಗಿ ಬರೋಬ್ಬರಿ 24 ಕೋಟಿ ರೂಪಾಯಿಗಳನ್ನು ತಮ್ಮ ಅಕೌಂಟ್ಗಳಿಗೆ ವರ್ಗಾಯಿಸಿಕೊಂಡು ದೋಚಿದ್ದರು.

ಅಷ್ಟೂ ಕೋಟಿ ಲೂಟಿ ಮಾಡಿದರೂ ವಂಚಕರ ಆಸೆ ಮಾತ್ರ ತೀರಿರಲಿಲ್ಲ. ಮತ್ತಷ್ಟು ಹಣಕ್ಕಾಗಿ ಅವರು ಪೀಡಿಸುತ್ತಲೇ ಇದ್ದರು. ಕೊನೆಗೆ ಬೇರೆ ದಾರಿ ಕಾಣದೆ ವೃದ್ಧೆ ಲಕ್ಷ್ಮೀ ನಾರಾಯಣ್ ಅವರು ತಮ್ಮ ಬಳಿಯಿದ್ದ ಚಿನ್ನದ ಒಡವೆಗಳನ್ನು ಅಡಮಾನ ಇಟ್ಟು ಹಣ ತರಲು ಬ್ಯಾಂಕ್ಗೆ ಹೋಗಿದ್ದರು. ಆದರೆ ಅಲ್ಲಿ ವೃದ್ಧೆಯ ಮುಖದಲ್ಲಿದ್ದ ಆತಂಕ ಮತ್ತು ಅವರ ವಿಚಿತ್ರ ವರ್ತನೆಯನ್ನು ಕಂಡು ಬ್ಯಾಂಕ್ ಮ್ಯಾನೇಜರ್ಗೆ ಅನುಮಾನ ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಮ್ಯಾನೇಜರ್, ವೃದ್ಧೆಯನ್ನು ಸಮಾಧಾನಪಡಿಸಿ ಅಸಲಿ ವಿಷಯ ಏನೆಂದು ವಿಚಾರಿಸಿದ್ದಾರೆ. ಆಗಲೇ ಈ ದೈತ್ಯ ಸೈಬರ್ ವಂಚನೆಯ ಜಾಲ ಬಯಲಿಗೆ ಬಂದಿದ್ದು ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆ ತೋರದೇ ಇದ್ದಿದ್ದರೆ ವೃದ್ಧೆಯ ಬಳಿ ಇದ್ದ ಉಳಿದ ಹಣ ಮತ್ತು ಒಡವೆಗಳೂ ಕಳ್ಳರ ಪಾಲಾಗುತ್ತಿದ್ದವು.

ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆದ ಬೆಂಗಳೂರು ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ದೇಶದ ವಿವಿಧ ಮೂಲೆಗಳಲ್ಲಿ ಅಡಗಿದ್ದ ಐವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಅಷ್ಟೇ ಅಲ್ಲದೆ, ವಂಚಕರು ಬಳಸುತ್ತಿದ್ದ ಬ್ಯಾಂಕ್ ಖಾತೆಗಳಲ್ಲಿದ್ದ ಸುಮಾರು 60 ಲಕ್ಷ ರೂಪಾಯಿ ನಗದನ್ನು ಅಧಿಕಾರಿಗಳು ಫ್ರೀಜ್ ಮಾಡಿದ್ದಾರೆ. ಸದ್ಯ ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ನೆಟ್ವರ್ಕ್ನ ಹಿಂದೆ ಇನ್ನೂ ಯಾರ್ಯಾರಿದ್ದಾರೆ ಎಂಬ ತನಿಖೆ ಚುರುಕಿನಿಂದ ಸಾಗಿದೆ.

ನೆನಪಿಡಿ
ಯಾವುದೇ ತನಿಖಾ ಸಂಸ್ಥೆಗಳು ಅಥವಾ ಪೊಲೀಸರು ವಿಡಿಯೋ ಕಾಲ್ ಮೂಲಕ ನಿಮ್ಮನ್ನು ‘ಡಿಜಿಟಲ್ ಅರೆಸ್ಟ್’ ಮಾಡಲು ಸಾಧ್ಯವಿಲ್ಲ. ಇಂತಹ ಕರೆಗಳು ಬಂದರೆ ತಕ್ಷಣ ಸೈಬರ್ ಕ್ರೈಮ್ ಹೆಲ್ಪ್ಲೈನ್ 1930ಗೆ ಕರೆ ಮಾಡಿ ದೂರು ನೀಡಿ. ಯಾರೇ ಆಗಲಿ ಅಪರಿಚಿತ ನಂಬರ್ಗಳಿಂದ ಬರುವ ಬೆದರಿಕೆ ಕರೆಗಳಿಗೆ ಹೆದರದೆ, ಜಾಗರೂಕರಾಗಿ ಇರುವುದೊಂದೇ ಇಂತಹ ಸೈಬರ್ ವಂಚನೆಗಳಿಂದ ಪಾರಾಗಲು ಇರುವ ಏಕೈಕ ಮಾರ್ಗ.

Join WhatsApp

Join Now

Join Telegram

Join Now