ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 16 : ಒಳ ಮೀಸಲಾತಿಯನ್ನು ಕೂಡಲೆ ಜಾರಿಗೊಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಮಾರಸಂದ್ರಮುನಿಯಪ್ಪ ನೇತೃತ್ವದಲ್ಲಿ ಮಾ. 19 ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಹಾಗೂ ಆರ್.ಪಿ.ಐ.(ಬಿ) ರಾಷ್ಟ್ರೀಯ ಅಧ್ಯಕ್ಷ ಡಾ.ಎನ್.ಮೂರ್ತಿ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಳ ಮೀಸಲಾತಿಯನ್ನು ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿ ಎಂಟು ತಿಂಗಳಾಗಿದ್ದರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ದತ್ತಾಂಶದ ನೆಪ ಹೇಳಿಕೊಂಡು ಕಾಲಹರಣ ಮಾಡುತ್ತ ದಲಿತರಿಗೆ ಅನ್ಯಾಯವೆಸಗುತ್ತಿರುವುದನ್ನು ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ, ಬಿಎಸ್‍ಪಿ. ಆರ್.ಪಿ.ಐ.ಬಿ. ಮಾದಿಗ ದಂಡೋರ, ಆದಿಜಾಂಬವ ಸಂಘಟನೆ ಒಳಗೊಂಡಂತೆ ಐವತ್ತಕ್ಕೂ ಹೆಚ್ಚು ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ ಎಂದು ಹೇಳಿದರು.
ನೆರೆಯ ಆಂಧ್ರದಲ್ಲಿ ಈಗಾಗಲೇ ಒಳ ಮೀಸಲಾತಿಯನ್ನು ಜಾರಿಗೆ ತರಲಾಗಿದೆ. ಎ.ಜೆ.ಸದಾಶಿವ ಆಯೋಗವನ್ನು ರಚಿಸಿದ ಸರ್ಕಾರವೇ ಕೈಕಟ್ಟಿ ಹಾಕಿದೆ. ಎರಡನೆ ಅವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರೂ ಸದಾಶಿವ ಆಯೋಗದ ವರದಿಯನ್ನು ನೋಡಿಲ್ಲ. ಒಂದು ಲಕ್ಷ ನೌಕರರನ್ನು ಬಳಸಿಕೊಂಡು ಏಳು ವರ್ಷಗಳ ಕಾಲ ನ್ಯಾಯಮೂರ್ತಿ ಎ.ಜೆ.ಸದಾಶಿವರವರು ವರದಿ ತಯಾರಿಸಿ ಸರ್ಕಾರಕ್ಕೆ ನೀಡಿದ್ದರೂ ದಲಿತರಿಗೆ ಪ್ರಯೋಜನಕ್ಕೆ ಬರದಂತಾಗಿದೆ. ಮಧ್ಯಂತರ ವರದಿಯನ್ನು ನಾಗಮೋಹನ್‍ದಾಸ್ ಸರ್ಕಾರಕ್ಕೆ ಸಲ್ಲಿಸಬೇಕು. ಒಳ ಮೀಸಲಾತಿ ಜಾರಿಗೊಳಿಸುವತನಕ ಯಾವುದೇ ಹುದ್ದೆಯನ್ನು ನೇಮಕ ಮಾಡಿಕೊಳ್ಳಬಾರದು. ಆದರೆ ದಲಿತ ಸಚಿವರುಗಳೆ ಬ್ಯಾಕ್‍ಲಾಗ್ ಹುದ್ದೆ ನೇಮಕ ಮಾಡಿಕೊಳ್ಳಲು ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಸಾಮಾಜಿಕ ನ್ಯಾಯವನ್ನು ಸಮಾಪ್ತಿ ಮಾಡಿದ ಮುಖ್ಯಮಂತ್ರಿ ದೇಶದಲ್ಲಿ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ ಎಂದು ಡಾ.ಎನ್.ಮೂರ್ತಿ ಕುಟುಕಿದರು.
ಕಾಂಗ್ರೆಸ್ ಮೃದು ಕೋಮುವಾದಿಯಾದರೆ ಬಿಜೆಪಿಯವರು ನೇರ ಕೋಮುವಾದಿಗಳು. ಇವರಿಬ್ಬರ ನಡುವೆ ಪರಿಶಿಷ್ಟ ಜಾತಿಯಲ್ಲಿನ ನೂರ ಒಂದು ಜಾತಿಯವರು ಹೈರಾಣಾಗಿದ್ದಾರೆ. ದಲಿತರ ಅಭಿವೃದ್ದಿಗಾಗಿಯೇ ಬಳಬೇಕಾಗಿರುವ ಎಸ್ಸಿಪಿ. ಟಿಎಸ್ಪಿ. ಹಣವನ್ನು ಐದು ಉಚಿತ ಗ್ಯಾರೆಂಟಿಗಳಿಗೆ ಮುಖ್ಯಮಂತ್ರಿ ಬಳಸುತ್ತಿದ್ದಾರೆ. ಏಳು ಅಭಿವೃದ್ದಿ ನಿಗಮಗಳಿಗೆ ಹಂಚಿಕೆಯಾಗಿರುವ ಪ್ರಕಾರ ಹಣ ಬಿಡುಗಡೆಯಾಗಿಲ್ಲ. ಒಳ ಮೀಸಲಾತಿ ಜಾರಿಯಾಗುವತನಕ ನಮ್ಮ ಹೋರಾಟ ನಿಲ್ಲುವುದಿಲ್ಲವೆಂದು ಡಾ.ಎನ್.ಮೂರ್ತಿ ಎಚ್ಚರಿಸಿದರು.
ಬೈಲ ಹೊನ್ನಯ್ಯ, ಲೇಖಕ ಹೆಚ್.ಆನಂದ್‍ಕುಮಾರ್, ವಿಶ್ವನಾರಾಯಣಮೂರ್ತಿ, ದಲಿತ ಮುಖಂಡ ಬಿ.ರಾಜಪ್ಪ, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

