ಸುದ್ದಿಒನ್,ಬೆಂಗಳೂರು,ಮೇ.07 : ಪ್ರೀತಿ ಎನ್ನುವ ಮಾಯಾಜಾಲಕ್ಕೆ ಬಿದ್ದು, ವಯಸ್ಸಿನ ಅಂತರವನ್ನೂ ಮರೆತು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ 15 ವರ್ಷದ ಬಾಲಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಚನ್ನಪಟ್ಟಣ ನಗರದ ರಾಜಾಕೆಂಪೇಗೌಡ ಬಡಾವಣೆಯಲ್ಲಿ ನಡೆದಿದೆ.
ಮೃತ ಬಾಲಕ ಮೂಲತಃ ಬಿಡದಿ ಮೂಲದವನಾಗಿದ್ದು, ಅದೇ ಗ್ರಾಮದ ಶೋಭಾ (26) ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. 15 ವರ್ಷದ ಬಾಲಕ ಹಾಗೂ 26 ವರ್ಷದ ಯುವತಿಯ ನಡುವಿನ ಈ ಸಂಬಂಧದ ವಿಷಯ ಪೋಷಕರಿಗೆ ತಿಳಿದಾಗ, ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. “ನಿಮ್ಮಿಬ್ಬರ ನಡುವೆ ವಯಸ್ಸಿನ ಅಂತರ ಹೆಚ್ಚಿದೆ, ಈ ಸಂಬಂಧ ಸರಿಯಲ್ಲ” ಎಂದು ಬಾಲಕನಿಗೆ ಬುದ್ಧಿ ಹೇಳಿ ತರಾಟೆಗೆ ತೆಗೆದುಕೊಂಡಿದ್ದರು.

ಪೋಷಕರ ಎಚ್ಚರಿಕೆಯ ನಂತರವೂ ಬಾಲಕ ಮತ್ತು ಯುವತಿ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್ ಮತ್ತು ಇನ್‌ಸ್ಟಾಗ್ರಾಂ ಮೂಲಕ ನಿರಂತರ ಸಂಪರ್ಕದಲ್ಲಿದ್ದರು. ಮನೆಯವರ ವಿರೋಧದಿಂದ ಬೇಸತ್ತ ಬಾಲಕ, ಬಿಡದಿಯಿಂದ ಹೊರಬಂದು ಚನ್ನಪಟ್ಟಣದ ರಾಜಾಕೆಂಪೇಗೌಡ ಬಡಾವಣೆಯಲ್ಲಿರುವ ತನ್ನ ಸ್ನೇಹಿತನ ಮನೆಯಲ್ಲಿ ನೆಲೆಸಿದ್ದ.
ಏಪ್ರಿಲ್ 29ರಂದು ಪ್ರೀತಿಸುವ ಯುವತಿ ಶೋಭಾ ಜೊತೆ ಇದೇ ವಿಚಾರವಾಗಿ ಜಗಳವಾಡಿಕೊಂಡ ಬಾಲಕ, ಮನನೊಂದು ವಿಷ ಸೇವಿಸಿದ್ದಾನೆ. ತಕ್ಷಣವೇ ಸ್ನೇಹಿತರು ಆತನನ್ನು ಚನ್ನಪಟ್ಟಣ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು.ಮೇ 4ರಂದು ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ತಮ್ಮ ಅಪ್ರಾಪ್ತ ಮಗನ ಸಾವಿಗೆ ಯುವತಿ ಶೋಭಾ ಅವರೇ ನೇರ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಯುವತಿಯ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


















