ಬೆಳಗಾವಿ: ಕಳೆದ ಕೆಲವು ದಿನಗಳಿಂದ ಗಡಿನಾಡು ವಿವಾದ ಹೆಚ್ಚಾಗಿದೆ. ಮಹಾರಾಷ್ಟ್ರದ ಎಂಇಎಸ್ ಪುಂಡರು ಬೆಳಗಾವಿ ವಿಚಾರಕ್ಕೆ ಯಾವಾಗಲೂ ಕ್ಯಾತೆ ತೆಗೆಯುತ್ತಲೆ ಇದ್ದಾರೆ. ಮಹಾರಾಷ್ಟ್ರದ ಸಚಿವರು ನಾವೂ ಬೆಳಗಾವಿಗೆ ಬರುತ್ತೀವಿ ಎಂದಿದ್ದರು. ಸಿಎಂ ಬಸವರಾಜ್ ಬೊಮ್ಮಾಯಿ ಅವರ ಎಚ್ಚರಿಕೆ ಕೊಟ್ಟ ಬೆನ್ನಲ್ಲೇ ಆ ಭೇಟಿ ಕ್ಯಾನ್ಸಲ್ ಆಗಿದೆ.
ಈ ಬೆನ್ನಲ್ಲೆ ಕನ್ನಡ ಪರ ಸಂಘಟನೆಗಳು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿವೆ. ಗಡಿ ವಿವಾದ ಬಗೆಹರಿಯುವ ತನಕ ಹೋರಾಟವನ್ನು ಕೈಬಿಡುವುದಿಲ್ಲ ಎಂದಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆಗೆ ಮಹಾರಾಷ್ಟ್ರ ಸಚಿವರು ಮತ್ತು ಶಾಸಕರು ಬರುವುದನ್ನು ನಾವೇ ತಡೆಯುತ್ತೇವೆ ಎಂದು ಕರವೇ ಕಾರ್ಯಕರ್ತರು ಪಣ ತೊಟ್ಟಿದ್ದಾರೆ.
ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರಿಂದ ಹೋರಾಟ ಜೋರಾಗಿದೆ. ಮಹಾರಾಷ್ಟ್ರದ ವಾಹನಗಳಿಗೆ ಮಸಿ ಬಳಿದು, ವಾಹನ ನಂಬರ್ ಪ್ಲೇಟ್ ಗಳನ್ನು ಕಿತ್ತು ಬಿಸಾಕಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಜೀವ ಬಿಡುತ್ತೇವೆ ವಿನಃ ಬೆಳಗಾವಿಯನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಗಡಿವಿವಾದ ಜೋರಾಗುತ್ತಿರುವ ಬೆನ್ನಲ್ಲೇ ಶಾಸಕ ಅರವಿಂದ್ ಬೆಲ್ಲದ್ ಈ ಗಡಿವಿವಾದಕ್ಕೆ ಅಷ್ಟೊಂದು ಮಹತ್ವ ಕೊಡುವುದು ಬೇಡ ಎಂದಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರಕ್ಕೆ ಹೊಸ ಸಿಎಂ ಬಂದ ಬಳಿಕ ಈ ರೀತಿಯ ಸಮಸ್ಯೆಗಳು ಕಾಡುತ್ತಿವೆ. ಈ ರೀತಿಯ ವಿವಾದವನ್ನು ಎಬ್ಬಿಸುವ ಕೆಲಸ ಮೊದಲಿನಿಂದಾನು ನಡೆಯುತ್ತಿದೆ ಎಂದಿದ್ದಾರೆ.