ಬೆಳಗಾವಿ: ಕಳೆದ ವರ್ಷ ಅಂದ್ರೆ 2023ರಲ್ಲಿಯೇ ಬೆಳಗಾವಿಯಲ್ಲಿ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿತ್ತು. ಆದರೆ ಆಮೇಲೆ ಅದರ ಸುಳಿವು ಇಲ್ಲ. ಇಲ್ಲಿವರೆಗೂ ಬೆಂಗಳೂರು-ಧಾರವಾಡ-ಹುಬ್ಬಳ್ಳಿ ಮಾರ್ಗದ ವಂದೇಭಾರತ್ ರೈಲು ಸಂಚಾರ ಆರಂಭವಾಗಿಲ್ಲ. ಬೆಳಗಾವಿಗೆ ವಂದೇ ಭಾರತ್ ರೈಲು ಸಂಚಾರ ಯಾವಾಗ ಎಂದು ಜನತೆ ಪ್ರಶ್ನೆ ಮಾಡುತ್ತಿದ್ದಾರೆ.
ಈ ಸಂಬಂಧ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್, ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಭೇಟಿಯಾಗಿದ್ದಾರೆ. ಸಚಿವರ ಬಳಿ ವಂದೇ ಭಾರತ್ ರೈಲಿನ ಬಗ್ಗೆ ಹಾಗೂ ಹಲವು ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಳಿಕ ಪೋಸ್ಟ್ ಒಂದನ್ನು ಹಾಕಿರುವ ಜಗದೀಶ್ ಶೆಟ್ಟರ್, ಬೆಳಗಾವಿ-ಕಿತ್ತೂರು-ಧಾರವಾಡ ನೇರ ರೈಲು ಮಾರ್ಗಕ್ಕೆ ಎರಡು ವರ್ಷಗಳ ಹಿಂದೆ ಭೂಸ್ವಾಧೀನಕ್ಕಾಗಿ ಪ್ರಸ್ತಾವನೆಗಳನ್ನು ಸಲ್ಲಿಸುವ ಪ್ರಕ್ರಿಯೆಯ ನಂತರವೂ ರಾಜ್ಯ ಸರ್ಕಾರದಿಂದ ಯಾವುದೇ ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿಲ್ಲ. ಬೆಳಗಾವಿ-ಕಿತ್ತೂರು-ಧಾರವಾಡ ಹೊಸ ರೈಲು ಮಾರ್ಗ ಯೋಜನೆ ತುರ್ತಾಗಿ ಅನುಷ್ಠಾನದ ಅಗತ್ಯವಿದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸ್ಥಾಪನೆಯೊಂದಿಗೆ ಬೆಳಗಾವಿ ನಗರವು ಶೈಕ್ಷಣಿಕವಾಗಿ ಮುಂದುವರೆದಿದೆ. ಇಂಜಿನಿಯರಿಂಗ್ ಕಾಲೇಜುಗಳು, ವೈದ್ಯಕೀಯ ಮತ್ತು ದಂತ ಕಾಲೇಜುಗಳು ಮತ್ತು ಏಷ್ಯಾದ ಅತಿದೊಡ್ಡ ಮತ್ತು ಪ್ರತಿಷ್ಠಿತ ಕೆಎಲ್ಇ ಆಸ್ಪತ್ರೆ ನಗರದಲ್ಲಿದೆ. ಬೆಳಗಾವಿ ನಗರವು ಕೈಗಾರಿಕೆಯಲ್ಲಿಯೂ ಮುಂದಿದೆ. ಬೆಳಗಾವಿ ರೈಲು ನಿಲ್ದಾಣವನ್ನು ಅಭಿವೃದ್ಧಿಗೊಳಿಸಲಾಗಿದೆ. ನೂತನ ಸೌಲಭ್ಯಗಳನ್ನು ನಿಲ್ದಾಣ ಹೊಂದಿದ್ದು, ಬೇಡಿಕೆಯ ಆಧಾರದ ಮೇರೆಗೆ ಬೆಳಗಾವಿಯಿಂದ ವಿವಿಧ ಮಾರ್ಗಗಳಲ್ಲಿ ಹೊಸ ರೈಲುಗಳನ್ನು ಪರಿಚಯಿಸಬೇಕು ಎಂದು ಮನವಿ ಮಾಡಲಾಗಿದೆ.