ಕೊಪ್ಪಳ : ತಮ್ಮ ಮೇಲಿನ ದೂರಿಗೆ ಸಂಬಂಧಿಸಿದಂತೆ ಲಿಖಿತ ಉತ್ತರ ನೀಡಲು ವಿಳಂಭ ಧೋರಣೆಯನ್ನು ಅನುಸರಿಸುತ್ತಿರುವ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ದ ಸೆಪ್ಟೆಂಬರ್ 5 ರ ಸೋಮವಾರ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಬೆಳಗ್ಗೆ 11 ಗಂಟೆಯಿಂದ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ವಿಷದ ಬಾಟಲಿಯೊಂದಿಗೆ ಅನಿರ್ದಿಷ್ಟ ಅವಧಿವರೆಗೆ ಧರಣಿ ನಡೆಸಲಿದ್ದಾರೆ.
ಬೀರಪ್ಪ ಅಂಡಗಿ ಚಿಲವಾಡಗಿ ಅವರು,ತಮ್ಮ ಮೇಲೆ ಆಧಾರ ಹಾಗೂ ಸಾಕ್ಷಿ ರಹಿತವಾದ ದೂರನ್ನು ನೀಡಲಾಗಿತ್ತು.ಆ ದೂರಿಗೆ ಸಂಬಂಧಿಸಿದಂತೆ ಬಿ.ಇ.ಓ.ಅವರೇ ನೇಮಕ ಮಾಡಿದ ಅಧಿಕಾರಿಗಳು ಕಳೆದ ಫೆಬ್ರವರಿ ತಿಂಗಳಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ವರದಿಯನ್ನು ಸಲ್ಲಿಸಿದ್ದಾರೆ.
ವರದಿಯನ್ನು ಆಧರಿಸಿ ತಪ್ಪು ಮಾಡಿದ್ದರೆ ನನ್ನ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ದೂರಿಗೆ ಸಂಬಂಧಿಸಿದಂತೆ ಲಿಖಿತ ಉತ್ತರ ನೀಡುವಂತೆ ಈಗಾಗಲೇ ಅನೇಕ ಬಾರಿ ಕಚೇರಿಗೆ ಲಿಖಿತ ಪತ್ರ ನೀಡುವುದರ ಜೊತೆಯಲ್ಲಿ ಕಚೇರಿಯ ಮುಂದೆ ಧರಣಿ ಕೂಡಾ ಮಾಡಲಾಗಿದ್ದರೂ ಕೂಡಾ ಅಧಿಕಾರಿಗಳು ಮಾತ್ರ ವರದಿ ನೀಡಿಲ್ಲ.ಯಾರದ್ದೂ ಒತ್ತಡಕ್ಕೆ ಮಣಿದು ಲಿಖಿತ ಉತ್ತರ ನೀಡಲು ವಿಳಂಭ ಮಾಡುತ್ತಿದ್ದಾರೆ.ಅಲ್ಲದೇ ವಿಕಲಚೇತನಾಗಿರುವುದರಿಂದ ಈ ರೀತಿಯಲ್ಲಿ ಅವಮಾನ ಮಾಡಬೇಕು ಎಂಬ ಉದ್ದೇಶವನ್ನು ಹೊಂದಿರಬಹುದು ಎಂಬುದು ಬೀರಪ್ಪ ಅಂಡಗಿ ಅವರ ವಾದವಾಗಿದೆ.
ಸೆಪ್ಟೆಂಬರ್ 3 ರ ಶನಿವಾರದ ಒಳಗಡೆ ತಮ್ಮ ದೂರಿಗೆ ಸಂಬಂಧಿಸಿದಂತೆ ಲಿಖಿತ ಉತ್ತರವನ್ನು ನೀಡಬೇಕು ಇಲ್ಲದಿದ್ದರೆ ಸೆಪ್ಟೆಂಬರ್ 5 ರ ಸೋಮವಾರ ಬೆಳಗ್ಗೆ 11 ಗಂಟೆಗೆ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ವಿಷದ ಬಾಟಲಿಯೊಂದಿಗೆ ಧರಣಿ ನಡೆಸಲಾಗುತ್ತದೆ.
ಒಂದು ವೇಳೆ ಬೀರಪ್ಪ ಅಂಡಗಿ ಅವರ ಜೀವಕ್ಕೆ ತೊಂದರೆ ಆದರೆ ಅದಕ್ಕೆ ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಹೊಣೆಗಾರರಾಗಿರುತ್ತಾರೆ.ಧರಣಿಯ ಸಮಯದಲ್ಲಿ ಕೂಡಾ ನ್ಯಾಯ ದೊರೆಯದಿದ್ದ ಪಕ್ಷದಲ್ಲಿ ಅನಿವಾರ್ಯವಾಗಿ ವಿಕಲಚೇತನ ಕಾಯ್ದೆ 2016 ರ ಕಲಂ.92 ರ ಅನ್ವಯ ವಿಶೇಷ ನ್ಯಾಯಾಲಯದಲ್ಲಿ ದೂರನ್ನು ಕೊಡುವ ಬಗ್ಗೆ ಚಿಂತನೆ ನಡೆದಿದ್ದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.