ನೀರು ಕಾಯಿಸಲು ಹೀಟರ್ ಹಾಕುವಾಗ ಎಚ್ಚರ: ಹೊಳಲ್ಕೆರೆಯಲ್ಲಿ ಕರೆಂಟ್ ಹೊಡೆದು ಯುವತಿ ಸಾವು..!

1 Min Read

 

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 21 : ಕರೆಂಟಿನ ವಿಚಾರದಲ್ಲಿ ಎಚ್ಚರವಾಗಿರಿ ಎಂದು ಹಲವರು ಹೇಳುತ್ತಾರೆ. ಕೊಂಚ ಯಾಮಾರಿದರು ವಿದ್ಯುತ್ ನಮ್ಮ ಪ್ರಾಣವನ್ನೆ ತೆಗೆಯುವಷ್ಟು ಬಲಶಾಲಿಯಾಗಿದೆ. ಅದರಲ್ಲೂ ಬಿಸಿ ನೀರಿಗಾಗಿ ಹೀಟರ್ ಹಾಕುವಾಗ ಹೆಚ್ಚಿನ ಎಚ್ಚರ ಒಳ್ಳೆಯದು. ಎಷ್ಟೋ ಸಲ ಯಾಮಾರಿ ನೀರು ಕಾದಿದೆಯಾ ಎಂದು ಬಕೆಟ್ ಒಳಗೆ ಕೈ ಹಾಕಲು ಹೋದವರು ಇದ್ದಾರೆ. ಇವತ್ತು ನೀರಿಗೆ ಹೀಟರ್ ಹಾಕಲು ಹೋದ ಯುವತಿಯೊಬ್ಬರು ಸಾವನ್ನಪ್ಪಿರುವ ಘಟನೆ ಘಟ್ಟಿ ಹೊಸಹಳ್ಳಿಯಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಘಟ್ಟಿ ಹೊಸಹಳ್ಳಿ ಗ್ರಾಮದ ಆರ್ ಪೂಜಾ ಎಂಬ ಯುವತಿ ಸಾವನ್ನಪ್ಪಿದ್ದಾರೆ. ಮೃತ ಪೂಜಾಗೆ ಕೇವಲ 18 ವರ್ಷ. ಬಾಳಿ ಬದುಕಬೇಕಿದ್ದ ಹೆಣ್ಣು ಮಗಳು, ವಿದ್ಯುತ್ ಶಾಕ್ ಗೆ ಬಲಿಯಾಗಿದ್ದಾರೆ. ಸ್ನಾನಕ್ಕಾಗಿ ನೀರು ಕಾಯಿಸಲು ಹಿಟರ್ ಹಾಕಿದ್ದರು. ಆದರೆ ಈ ವೇಳೆ ವಿದ್ಯುತ್ ಸ್ಪರ್ಶಿಸಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಚಿತ್ರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಕರೆಂಟ್ ಶಾಕ್ ನಿಂದಾಗಿ ಮಗಳನ್ನು ಕಳೆದುಕೊಂಡ ಪೋಷಕರು ದುಃಖದಲ್ಲಿದ್ದಾರೆ. ಇಷ್ಟು ಚಿಕ್ಕ ವಯಸ್ಸಿಗೆ ವಿಧಿ ಆ ಯುವತಿಗೆ ಕರೆಂಟ್ ಶಾಕ್ ಮೂಲಕ ಬಲಿ ಪಡೆದಿದೆ. ಬಾಳಿ ಬದುಕಬೇಕಿದ್ದ ಹೆಣ್ಣು‌ ಮಗು, ಸ್ಮಶಾನದಲ್ಲಿ ಮಲಗಿದೆ. ಮಳೆಗಾಲ ಬೇರೆ. ಬಿಸಿನೀರಿಗೆ ಸೌದೆ ಇಲ್ಲ, ಸೋಲಾರ್ ನಲ್ಲಿ ಬಿಸಿ ನೀರು ಬರ್ತಿಲ್ಲ ಅಂತ ಹೀಟರ್ ಬಳಸುವವರೇ ಹೆಚ್ಚು. ಹೀಗೆ ಹೀಟರ್ ಹಾಕುವ ಮುನ್ನ ಆ ಹೀಟರ್ ಚೆನ್ನಾಗಿದೆಯಾ ಎಂಬುದನ್ನು ಪರೀಕ್ಷಿಸಿ. ಹೀಟರ್ ಹಾಕಿದ ಮೇಲೂ ಅದರಿಂದ ಸ್ವಲ್ಪ ದೂರವೇ ಇರಿ.

Share This Article
Leave a Comment

Leave a Reply

Your email address will not be published. Required fields are marked *