ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 07 : ಸಾಮಾನ್ಯ ಕುಟುಂಬದಿಂದ ಬಂದು ಮುಖ್ಯಮಂತ್ರಿ ಹುದ್ದೆಗೇರಿ 16 ಬಜೆಟ್ಗಳನ್ನು ಮಂಡಿಸಿ, ರಾಜ್ಯದ ಜನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿರುವ ಸಿದ್ದರಾಮಯ್ಯ ಅವರಿಗೆ ಅವರೇ ಸಾಟಿ ಎನ್ನಬಹುದು. ನುಡಿದಂತೆ ನಡೆಯುವ, ಬಡಜನರ ಆಶಾಕಿರಣ, ನೊಂದ ಜನರ ಪಾಲಿಗೆ ತಾಯಿ, ಲೆಕ್ಕದ ಹಾದಿ ತಪ್ಪದೆ ಬಜೆಟ್ ಮಂಡಿಸಿ, ರಾಜ್ಯವನ್ನು ಆರ್ಥಿಕ ಸುಧಾರಣೆಯತ್ತ ಕೊಂಡೊಯ್ಯುವ ಜಾಣ್ಮೆ ನಿಜಕ್ಕೂ ವಿಸ್ಮಯ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದ್ದಾರೆ.

ಶುಕ್ರವಾರ ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಿರೀಕ್ಷೆಗೂ ಮೀರಿ ಕೃಷಿ, ಆರೋಗ್ಯ, ಶಿಕ್ಷಣ, ಕೈಗಾರಿಕೆ ಹೀಗೆ ವಿವಿಧ ಕ್ಷೇತ್ರಗಳ ಮೂಲಕ ಕನ್ನಡ ನಾಡನ್ನು ದೇಶದಲ್ಲಿಯೇ ಎತ್ತರ ಸ್ಥಾನಕ್ಕೆ ಕೊಂಡೊಯ್ಯುವ ಹಾದಿಯಲ್ಲಿ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಆಟದ ದಿಗ್ಗಜ ಸಚಿನ್ ತೆಂಡೊಲ್ಕರ್ ರೀತಿ ಆಡಳಿತದಲ್ಲಿ ತನ್ನ ದಾಖಲೆಗಳನ್ನೇ ತಾನೇ ಸರಿಗಟ್ಟುತ್ತಿರುವ ಸಿದ್ದರಾಮಯ್ಯ ದೇಶದ ಬಹುದೊಡ್ಡ ಆರ್ಥಿಕ ತಜ್ಞ ಎಂಬುದಕ್ಕೆ ಈ ಬಾರಿಯ ಬಜೆಟ್ ಕಣ್ಣೇದುರಿಗೆ ಇದೆ. ಪ್ರತಿಪಕ್ಷಗಳು ಕೂಡ ನಿಬ್ಬೇರಗಾಗುವ ರೀತಿ ಆರ್ಥಿಕ ಪ್ರಗತಿಯತ್ತ ನಾಡನ್ನು ಕರೆದೊಯ್ಯುವ ಬಜೆಟ್ ಮಂಡಿಸಲಾಗಿದೆ ಎಂದಿದ್ದಾರೆ.

ಅದರಲ್ಲೂ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ಪ್ರಗತಿಗೆ ತಾಯಿ ಹೃದಯದ ರೀತಿ ಹೆಚ್ಚು ಮನ್ನಣೆ ನೀಡಿರುವುದು ಸ್ವಾಗತರ್ಹ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿರುವ 5,300 ಕೋಟಿ ರೂ. ಬಿಡುಗಡೆ ಮಾಡದೇ, ಕಾಮಗಾರಿ ತ್ವರಿತಕ್ಕೆ ಅಡ್ಡಿಯಾಗಿರುವ ವಾಸ್ತವ ಸತ್ಯ ಅರಿತು 2,611 ಕೋಟಿ ರೂ. ಅನುದಾನ ನೀಡುವ ಮೂಲಕ ಹೊಸದುರ್ಗ, ಹೊಳಲ್ಕೆರೆ, ಜಗಳೂರು, ಮೊಳಕಾಲ್ಮೂರು, ಚಳ್ಳಕೆರೆ ಮತ್ತು ಪಾವಗಡ ತಾಲ್ಲೂಕುಗಳಲ್ಲಿನ 30 ಕೆರೆಗಳನ್ನು ತುಂಬಿಸಿ ಒಂದು ಲಕ್ಷದ ಎಪ್ಪತ್ತೇಳು ಸಾವಿರ ಎಕರೆ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ಹಾಗೂ ತರೀಕೆರೆ ಏತ ನೀರಾವರಿ ಯೋಜನೆಯಡಿ 79 ಕೆರೆಗಳನ್ನು ತುಂಬಿಸುವ ಮೂಲಕ 49,790 ಎಕರೆ ಸೂಕ್ಷ್ಮ ನೀರಾವರಿ ಸಾಮರ್ಥ್ಯ ಕಲ್ಪಿಸಲು ಹೆಜ್ಜೆ ಇಟ್ಟಿರುವುದು ಬಯಲುಸೀಮೆ ರೈತರಲ್ಲಿ ಆಶಾಕಿರಣ ಮೂಡಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ಪ್ರತಿ ಕ್ವಿಂಟಾಲ್ಗೆ 7,550 ರೂ. ಜೊತೆಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿ ಪ್ರೋತ್ಸಾಹಧನ 450 ರೂ. ನೀಡುವ ನೀತಿ ಚಿತ್ರದುರ್ಗ ಜಿಲ್ಲೆ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಮೊಳಕಾಲ್ಮೂರಿನಲ್ಲಿ 200 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ, ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಟ್ರಾಮಾ ಕೇರ್ ಕೇಂದ್ರ, ಹೊಸ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ಸ್ವಯಂಚಾಲಿತ ಪರೀಕ್ಷಾ ಪಥ ನಿರ್ಮಾಣ, ವಾಹನ ಸಂಚಾರವನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿ ನಿಯಂತ್ರಿಸಲು ಎಐ ಆಧಾರಿತ ವಿದ್ಯುನ್ಮಾನ ಕ್ಯಾಮರಾಗಳನ್ನು ಅಳವಡಿಸುವ ಯೋಜನೆಗಳು ಜಿಲ್ಲೆಯ ಜನರಿಗೆ ಅನುಕೂಲ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ವಿಪಕ್ಷಗಳು ರಾಜಕೀಯ ಕಣ್ಣಲ್ಲಿ ನೋಡಿದರೂ ಉತ್ತಮವೇ ಆಗಿದೆ ಎಂಬಷ್ಟು ಜನಪರವಾಗಿದೆ ಎಂದು ಚಂದ್ರಪ್ಪ ತಿಳಿಸಿದ್ದಾರೆ.

