ನವದೆಹಲಿ : ಕಾಂಗ್ರೆಸ್‌ನ ಭರ್ಜರಿ ಗೆಲುವಿನ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮುಖ್ಯಮಂತ್ರಿ ಪಟ್ಟಕ್ಕಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರು ನಾಯಕರು ಪಟ್ಟುಹಿಡಿದಿದ್ದು ಯಾರೊಬ್ಬರೂ ಪಟ್ಟು ಸಡಿಲಿಸುತ್ತಿಲ್ಲ. ಇದರಿಂದಾಗಿ ಹೈಕಮಾಂಡ್ ನಾಯಕರು ಹೈರಾಣಾಗಿ ಹೋಗಿದ್ದಾರೆ.
ಅಂತಿಮ ಹಂತಕ್ಕೆ ತಲುಪಿರುವ ಹಗ್ಗಜಗ್ಗಾಟಕ್ಕೆ ಇಂದು ತೆರೆ ಎಳೆಯಲು ಹೈಕಮಾಂಡ್ ನಾಯಕರು ತೀವ್ರ ಕಸರತ್ತು ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಇಂದು ಸಂಜೆ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಬ್ಬರು ನಾಯಕರೊಂದಿಗೆ ಸಭೆಯನ್ನು ನಿಗದಿಪಡಿಸಿದ್ದಾರೆ.
ಈಗಾಗಲೇ ಡಿಕೆ ಶಿವಕುಮಾರ್ ಅವರೊಂದಿಗಿನ ಸಭೆ ಮುಗಿದಿದ್ದು, ಇದೀಗ ಖರ್ಗೆ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂತರ ಮುಖ್ಯಮಂತ್ರಿ ಯಾರೆಂದು ಇಂದು ರಾತ್ರಿಯೇ ಘೋಷಣೆ ಮಾಡುವ ಸಾಧ್ಯತೆಯಿದೆ.
ಸಿದ್ದರಾಮಯ್ಯ ಅವರೊಂದಿಗಿನ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ . ಆದರೆ ಪಕ್ಷದ ನಿರ್ಧಾರ ಏನೇ ಇರಲಿ, ಬೆನ್ನಿಗೆ ಚೂರಿ ಹಾಕುವ ಅಥವಾ ಬ್ಲ್ಯಾಕ್‌ಮೇಲ್ ಮಾಡುವ ಕ್ರಮಕ್ಕೆ ನಾನು ಮುಂದಾಗುವುದಿಲ್ಲ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಇಬ್ಬರು ನಾಯಕರ ಜಿದ್ದಾಜಿದ್ದಿನ ಪೈಪೋಟಿಯಿಂದ ಕಾಂಗ್ರೆಸ್ ಹೈಕಮಾಂಡ್ ನಾಯಕರು ಹೈರಣಾಗಿದ್ದಾರೆ.