ಪುನೀತ್‍ರಾಜಕುಮಾರ್ ಅವರಿಗೆ ಬಸವಶ್ರೀ ಪ್ರಶಸ್ತಿ

1 Min Read

ಚಿತ್ರದುರ್ಗ,( ನ. 04 ) ಕನ್ನಡ ಚಿತ್ರರಂಗದ ಹೆಸರಾಂತ ನಟ ಪವರ್‌ ಸ್ಟಾರ್ ದಿವಂಗತ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಪ್ರತಿಷ್ಠಿತ 2021 ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಪ್ರಕಟಿಸಿದ್ದಾರೆ.

ಶ್ರೀಮಠದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಪುನೀತ್ ರಾಜಕುಮಾರ್ ಅವರು, ಬಾಲನಟನಾಗಿ, ನಾಯಕ ನಟನಾಗಿ, ಹಿನ್ನೆಲೆ ಗಾಯಕರಾಗಿ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅಲ್ಲದೇ, ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ರಾಯಭಾರಿಯಾಗಿ, ಸಾಮಾಜಿಕ ಜಾಗೃತಿಯ ಪ್ರಚಾರಕರಾಗಿಯೂ ಸಮಾಜ ಸೇವೆ ಸಲ್ಲಿಸಿದ್ದಾರೆ.

ಇಂತಹ ಮೇರುನಟ ಇತ್ತೀಚೆಗೆ ಹೃದಯಾಘಾತದಿಂದ ನಮ್ಮನ್ನು ಅಗಲಿರುವುದು ಕೋಟ್ಯಂತರ ಅಭಿಮಾನಿಗಳಿಗೆ ನೋವನ್ನುಂಟು ಮಾಡಿದೆ. ಅವರ ಕುಟುಂಬದವರು ನೋವನ್ನು ಸಹಿಸಿಕೊಳ್ಳಲು ಬಸವಾದಿ ಪ್ರಮಥರ ಆಶೀರ್ವಾದ ಸದಾ ಇರಲಿ.

ಮಾನವೀಯ ಮೌಲ್ಯಗಳನ್ನೊಳಗೊಂಡಿದ್ದ ಪುನೀತ್ ಅವರ ಸಾಧನೆ ದೊಡ್ಡದು. ಚಿಕ್ಕ ವಯಸ್ಸಿನಲ್ಲಿಯೇ ಅದ್ವಿತೀಯ ಸಾಧನೆ ಮಾಡಿ ಹೋಗಿದ್ದಾರೆ.
ಪ್ರಶಸ್ತಿಯು 5ಲಕ್ಷ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ಪ್ರಶಸ್ತಿಯನ್ನು ಬರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು. ಇದೇ ತಿಂಗಳು 10ನೇ ತಾರೀಕು ಬೆಂಗಳೂರಿನ ಅವರ ಮನೆಗೆ ತೆರಳಿ ಕುಟುಂಬವರ್ಗದವರಿಗೆ ಸಾಂತ್ವನ ಹೇಳಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಆಡಳಿತ ಮಂಡಳಿ ಸದಸ್ಯ ಕೆಇಬಿ ಷಣ್ಣುಕಪ್ಪ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *