ಚಿಕ್ಕಬಳ್ಳಾಪುರ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಜನ ಕಂಗಾಲಾಗಿದ್ದಾರೆ. ಇವತ್ತು ಕೊಂಚ ವರುಣಾರಾಯ ಬ್ರೇಕ್ ಕೊಟ್ಟಿದ್ದ. ಸಾಕಪ್ಪ ಸಾಕು ಅಂತ ನಿಟ್ಟುಸಿರು ಬಿಟ್ಟವರಿಗೆ ಸಂಜೆ ವೇಳೆಗೆ ಮತ್ತೆ ಮಳೆರಾಯ ತನ್ನ ಚಳಕ ತೋರಿಸಿದ್ದಾನೆ. ಜೋರು ಮಳೆಯಿಂದಾಗಿ ಮತ್ತೆ ಜನ ಹೈರಾಣಾಗಿದ್ದಾರೆ.
ನಗರ ಪ್ರದೇಶದ ಜನರಿಗೆ ಒಂದು ರೀತಿಯ ಸಮಸ್ಯೆಯಾದ್ರೆ ಗ್ರಾಮೀಣ ಭಾಗದ ರೈತರ ಗೋಳು ಕೇಳುವಂತಿಲ್ಲ. ಜಾನುವಾರುಗಳು ಮೇವಿಲ್ಲದೆ ಪರದಾಡಯವಂತಾಗಿದೆ. ಒಂದೇ ಸಮನೆ ಸುರಿಯುವ ಮಳೆಯಿಂದಾಗಿ ಹಸಿ ಮೇವು ತರಲು ಆಗುತ್ತಿಲ್ಲ, ಜಾನುವಾರುಗಳಿಗೆ ನೀಡಲು ಆಗುತ್ತಿಲ್ಲ ಅಂತ ಪರಿಸ್ಥಿತಿ ಎದುರಾಗಿದೆ.
ಮತ್ತೊಂದು ಕಡೆ ಮಳೆಯಿಂದಾಗಿ ರೈತರು ಬೆಳೆದ ಬೆಳೆ ಸಂಪೂರ್ಣ ನೀರು ಪಾಲಾಗಿದೆ. ಬೆಳೆ ಪರಿಹಾರಕ್ಕಾಗಿ ರೈತರು ಸರ್ಕಾರದತ್ತ ನೋಡುತ್ತಿದ್ದಾರೆ. ಜೊತೆಗೆ ಮಳೆಯಿಂದಾಗಿ ಮನೆಗಳು ಕುಸಿದು ಬದುಕು ಇನ್ನು ದುಸ್ತರವಾಗಿದೆ. ಮನೆ ಕಳೆದುಕೊಂಡವರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಪರಿಹಾರ ಘೋಷಣೆ ಮಾಡಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ನೀಡಿದ ಮಾಹಿತಿ ಆಧಾರದ ಮೇಲೆ ಸಂಪೂರ್ಣ ಹಾಳಾಗಿರುವ ಮನೆಗೆ 5 ಲಕ್ಷ ಪರಿಹಾರ ಹಾಗೂ ಭಾಗಶಃ ಹಾಳಾಗಿರುವ ಮನೆಗಳಿಗೆ 3 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಜೊತೆಗೆ ನಾಳೆಯಿಂದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆಂದು ತಿಳಿಸಿದ್ದಾರೆ.