ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ : ಹನ್ನೆರಡನೆ ಶತಮಾನದ ಬಸವಣ್ಣನವರ ಆದರ್ಶಗಳ ಮೂಲಕ ಬೆಳಕನ್ನು ಪ್ರಜ್ವಲಿಸಿ ಅಜ್ಞಾನದ ಕೊಳೆಯನ್ನು ತೊಳೆಯಬೇಕಿದೆ ಎಂದು ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ರಂಗಸೌರಭ ಕಲಾ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಸಾಣೆಹಳ್ಳಿಯ ಶಿವಕುಮಾರ ಕಲಾ ತಂಡದ ವತಿಯಿಂದ ತ.ರಾ.ಸು.ರಂಗ ಮಂದಿರದಲ್ಲಿ ಶನಿವಾರ ಪ್ರದರ್ಶನಗೊಂಡ ಬಸವಣ್ಣನವರ 44 ವಚನಗಳನ್ನು ಆಧರಿಸಿರುವ ನೀನಲ್ಲದೆ ಮತ್ತಾರು ಇಲ್ಲವಯ್ಯ ನೃತ್ಯ ರೂಪಕದ ಸಾನಿಧ್ಯ ವಹಿಸಿ ಮಾತನಾಡಿದರು.
ಧಾರ್ಮಿಕ, ಸಾಮಾಜಿಕ, ರಾಜಕೀಯ ಎಲ್ಲಾ ಕ್ಷೇತ್ರಗಳು ಕಲುಷಿತಗೊಂಡಿವೆ. ಬಸವಣ್ಣನವರು ವಚನಗಳನ್ನು ಪಾಲಿಸುವಲ್ಲಿ ಆದರ್ಶವಾಗಿ ಬದುಕಿ ಎಲ್ಲವನ್ನು ತ್ಯಾಗ ಮಾಡಿದರು. ಆದರೆ ಇಂದು ರಾಜಕಾರಣಿಗಳು ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಏನೆಲ್ಲಾ ತ್ಯಾಗ ಮಾಡಲು ಸಿದ್ದರಿದ್ದಾರೆ.
ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಬಸವಣ್ಣನವರ ವಚನಗಳನ್ನು ಇಂಗ್ಲಿಷ್‍ಗೆ ಅನುವಾಸಿದ್ದರು.
ಅವರ ಆಸೆಯಂತೆ ನಾವು ಹಿಂದಿಯಲ್ಲಿ ಅನುವಾದಿಸಿ 24 ಮಹಿಳೆಯರು ಹನ್ನೊಂದು ರಾಜ್ಯದ 47 ಸ್ಥಳಗಳಲ್ಲಿ ಪ್ರದರ್ಶಿಸಿರುವುದಕ್ಕೆ ದೇಶದ ಪ್ರಧಾನಿ ಮೋದಿರವರು ಪ್ರಶಂಸೆ ಪತ್ರ ಬರೆದಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.
ನೈತಿಕ, ಧಾರ್ಮಿಕವಾಗಿ ಸಮಾಜ ಅಧಃಪತನಕ್ಕೆ ಇಳಿದಿದೆ. ಬಸವಣ್ಣನವರ ಆದರ್ಶಗಳನ್ನು ಪಾಲಿಸುವವರು ಸೇವಾ ಕಾರ್ಯ ಮಾಡಬಲ್ಲರು. ನೃತ್ಯ ರೂಪಕದ ಹಿಂದೆ ಶ್ರೀನಿವಾಸ್ ಕಪ್ಪಣ್ಣ ಸೇರಿದಂತೆ ಅನೇಕರ ಶ್ರಮಿವಿದೆ. ಸ್ನೇಹ ಕಪ್ಪಣ್ಣನವರು ತಂಡಕ್ಕೆ ವಿಶೇಷ ತರಬೇತಿ ನೀಡಿ ಎಲ್ಲಾ ರಾಜ್ಯಗಳ ಜನಮನ ತಟ್ಟಿದ್ದಾರೆಂದು ಶ್ಲಾಘಿಸಿದರು.
ನೃತ್ಯ ರೂಪಕ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಬಿ.ಎಸ್.ರೇಖ ವಚನಗಳನ್ನು ಪಾಲಿಸುವುದರಲ್ಲಿ ಮೊದಲು ಎಲ್ಲರೂ ಕ್ರಿಯಾಶೀಲರಾಗಬೇಕು. ಬಸವಣ್ಣನವರ ಆಶಯದಂತೆ ವಚನ ಬದ್ದರಾಗಿ ಕೆಲಸ ಮಾಡಿದಾಗ ಮಾತ್ರ ದೇಶ ಮುಂದುವರೆಯಲು ಸಾಧ್ಯ. ಕಲಿಕೆಗೆ ವಯಸ್ಸಿನ ಮಿತಿಯಿಲ್ಲ. ಮನಸ್ಸಿರಬೇಕು ಎಂದು ಹೇಳಿದರು.
ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮಿ ಮಾತನಾಡಿ ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಬಸವಣ್ಣನವರ ವಚನಗಳನ್ನು ನೃತ್ಯ ರೂಪಕದ ಮೂಲಕ ದೇಶಾದ್ಯಂತ ಪಸರಿಸುತ್ತಿದ್ದಾರೆ. ಬಾಂಬೆ ಮತ್ತು ದಿಲ್ಲಿಯಲ್ಲಿ ಹಿಂದಿಗೆ ಅನುವಾದಗೊಳಿಸಿ ನೃತ್ಯರೂಪಕ ಪ್ರದರ್ಶಿಸಿ ಎಲ್ಲರ ಮನಗೆದ್ದಿರುವುದು ಸುಲಭದ ಕೆಲಸವಲ್ಲ. ಕನ್ನಡದ ಸೊಗಡನ್ನು ಎಲ್ಲೆಡೆ ಹರಡುವ ಕೆಲಸ ಮಾಡುತ್ತಿರುವ ಏಕೈಕ ಗುರು ಎಂದು ಗುಣಗಾನ ಮಾಡಿದರು.
ಚಿತ್ರದುರ್ಗ ಮುರುಘಾಮಠದ ಬಸವಪ್ರಭು ಸ್ವಾಮೀಜಿ ಮಾತನಾಡುತ್ತ ಕ್ರಾಂತಿಕಾರಿ ಬಸವಣ್ಣನವರ ತತ್ವಗಳನ್ನು ಪ್ರತಿಯೊಬ್ಬರು ಪಾಲಿಸಿದರೆ ಲೋಕ ಉಳಿಯುತ್ತದೆ. ಎಲ್ಲರೂ ಕಾಯಕ ಮಾಡಿ ಜೀವಿಸಬೇಕೆಂಬುದು ಬಸವಣ್ಣನವರ ಆಶಯವಾಗಿತ್ತು. ಕಾಯಕ, ದಾಸೋಹ, ಸಮಾನತೆ ಅವರ ಮೂಲ ಮಂತ್ರ. ಯಾರು ದೊಡ್ಡವರಲ್ಲ ಎನ್ನುವ ಮೂಲಕ ಸಮ ಸಮಾನತೆ ಕೊಟ್ಟಿದ್ದಾರೆ. ಒತ್ತಡದ ನಡುವೆಯೇ ಎಲ್ಲರೂ ಜೀವಿಸುತ್ತಿರುವ ಇಂದಿನ ಕಾಲದಲ್ಲಿ ಲಿಂಗಪೂಜೆಯಿಂದ ಮಾತ್ರ ಮನಸ್ಸಿಗೆ ಶಾಂತಿ ದೊರಕುತ್ತದೆ. ಒತ್ತಡದಿಂದ ಹೊರಬರಬೇಕಾದರೆ ಶಿವಯೋಗ ಬೇಕು ಎಂದರು.
ಬಸವತತ್ವವನ್ನು ಮನೆ ಮನೆಗೆ ಮುಟ್ಟಿಸುವ ಕೀರ್ತಿ ಸಾಣೆಹಳ್ಳಿ ಹಾಗೂ ಮುರುಘಾಮಠಕ್ಕೆ ಸೇರುತ್ತೆ. ನೃತ್ಯ ರೂಪಕವನ್ನು ಮೆಚ್ಚಿ ಪ್ರಧಾನಿ ಮೋದಿ ಕೂಡ ಪ್ರಶಂಶಿಸಿರುವುದು ಸಾಣೆಹಳ್ಳಿ ಶ್ರೀಗಳ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ ಹನ್ನೊಂದು ರಾಜ್ಯಗಳಲ್ಲಿ 52 ಪ್ರದರ್ಶನಗೊಂಡಿರುವ ನೀನಲ್ಲದೆ ಮತ್ತಾರು ಇಲ್ಲವಯ್ಯ ನೃತ್ಯರೂಪಕ ಹನ್ನೊಂದು ಸಾವಿರ ಕಿ.ಮೀ.ದೂರ ಕ್ರಮಿಸಿ ಚಿತ್ರದುರ್ಗದ ತ.ರಾ.ಸು.ರಂಗಮಂದಿರಕ್ಕೆ ಬಂದಿದೆ. ಆರ್ಥಿಕ, ಧಾರ್ಮಿಕ, ಸಾಮಾಜಿಕ ಸುಧಾರಕ ಬಸವಣ್ಣನವರ ವಚನಗಳು ನೃತ್ಯ ರೂಪಕದಲ್ಲಿರುವುದರಿಂದ ಎಲ್ಲರೂ ನೋಡಿ ಜೀವನದಲ್ಲಿ ಪಾಲನೆ ಮಾಡಬೇಕೆಂದು ಮನವಿ ಮಾಡಿದರು.
ಚಿತ್ರದುರ್ಗದ ಹಿಂದಿನ ಜಿಲ್ಲಾ ರಕ್ಷಣಾಧಿಕಾರಿ ಕೆ.ಪರಶುರಾಂ ಮಾತನಾಡಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ವೇದಿಕೆಯಲ್ಲಿದ್ದರು.