ಕೊಚ್ಚಿ: ರಾಜ್ಯಾದ್ಯಂತ ತೀವ್ರ ವಿವಾದ ಮತ್ತು ಆಕ್ರೋಶಕ್ಕೆ ಕಾರಣವಾಗಿರುವ ‘ಬಸವ ಮಂಟಪ’ ಪುಸ್ತಕದ ಲೇಖಕ ರವಿ ಹಂಜ್ ಅವರನ್ನು ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ವಿದೇಶಕ್ಕೆ ತೆರಳಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ಲುಕ್ಔಟ್ ನೋಟಿಸ್ (LOC) ಆಧರಿಸಿ ಸಿಐಎಸ್ಎಫ್ ಸಿಬ್ಬಂದಿ ಈ ಕ್ರಮ ಕೈಗೊಂಡಿದ್ದಾರೆ.
ವಿವಾದಾತ್ಮಕ ಪುಸ್ತಕಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ರವಿ ಹಂಜ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಪೈಕಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಹಾಗೂ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯ ಅಧಿಕಾರಿಗಳು ರವಿ ಹಂಜ್ ವಿರುದ್ಧ ಲುಕ್ಔಟ್ ನೋಟಿಸ್ ಜಾರಿಗೊಳಿಸಿದ್ದರು. ಇಂದು ಬೆಳಗ್ಗೆ ಕೊಚ್ಚಿ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ತೆರಳಲು ಪಾಸ್ಪೋರ್ಟ್ ಹಾಗೂ ಭದ್ರತಾ ತಪಾಸಣೆಗೆ ಒಳಗಾದಾಗ, ಲುಕ್ಔಟ್ ನೋಟಿಸ್ ಮಾಹಿತಿ ಪತ್ತೆಯಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದು, ಬೆಂಗಳೂರು ಹಾಗೂ ಬೆಳಗಾವಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ಪುಸ್ತಕದ ಕುರಿತು ವಿವಾದ ಭುಗಿಲೆದ್ದು, ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಬಸವ ಸಮಿತಿಯಿಂದ ದೂರು ದಾಖಲಾಗುತ್ತಿದ್ದಂತೆಯೇ ರವಿ ಹಂಜ್ ತಾವು ಅಮೆರಿಕಕ್ಕೆ ತೆರಳಿರುವುದಾಗಿ ಬಿಂಬಿಸಿದ್ದರು. ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದ ಅವರು, ದೂರು ದಾಖಲಾಗುವುದು ತಮಗೆ ಮೊದಲೇ ತಿಳಿದಿತ್ತು ಎಂಬರ್ಥದಲ್ಲಿ ಕಿಚಾಯಿಸುವ ಧಾಟಿಯಲ್ಲಿ ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ಅನಾಮಧೇಯ ಸ್ಥಳದಿಂದ ಕ್ಷಮಾಪಣೆ ಹಾಗೂ ವಿಷಾದ ವ್ಯಕ್ತಪಡಿಸುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಮತ್ತೊಂದು ವಿಡಿಯೋದಲ್ಲಿ ಅಭಿಮಾನಿಗಳಿಗಾಗಿ ಪುಸ್ತಕವನ್ನು ಶೀಘ್ರದಲ್ಲೇ ಮರುಬಿಡುಗಡೆ ಮಾಡುವುದಾಗಿಯೂ ಹೇಳಿಕೊಂಡಿದ್ದರು. ಇದರಿಂದಾಗಿ ಅವರು ಈಗಾಗಲೇ ವಿದೇಶಕ್ಕೆ ಹಾರಿದ್ದಾರೆ ಎಂದು ನಂಬಲಾಗಿತ್ತು. ಆದರೆ, ಅವರು ದೇಶದಲ್ಲೇ ಇದ್ದು ಇದೀಗ ಕೇರಳದ ಮೂಲಕ ವಿದೇಶಕ್ಕೆ ಪರಾರಿಯಾಗಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.











