ಬೆಂಗಳೂರು: ಸಚಿವ ಅಶ್ವತ್ಥ್ ನಾರಾಯಣ್ ಟಿಪ್ಪು ವಿಚಾರವನ್ನಿಟ್ಟುಕೊಂಡು ಸಿದ್ದರಾಮಯ್ಯ ಅವರನ್ನು ಅದೇ ರೀತಿ ಹೊಡೆದು ಹಾಕಬೇಕು ಎಂದು ಹೇಳೀದ್ದರು. ಈ ಹೇಳಿಕೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಸಿದ್ದರಾಮಯ್ಯ ಟ್ವೀಟ್ ಮೂಲ ಆಕ್ರೋಶ ಹೊರ ಹಾಕಿದರು. ಬಳಿಕ ತಮ್ಮ ಹೇಳಿಕೆಗೆ ಅಶ್ವತ್ಥ್ ನಾರಾಯಣ್ ಸಮರ್ಥನೆ ಕೂಡ ನೀಡಿದ್ದಾರೆ. ಕ್ಷಮೆ ಕೂಡ ಕೇಳಿದ್ದಾರೆ. ಆದ್ರೆ ಈ ವಿಚಾರ ತಣ್ಣಗಾಗುವ ಲಕ್ಷಣಗಳೆ ಕಾಣಿಸುತ್ತಿಲ್ಲ. ಇದೀಗ ಅವರದ್ದೇ ಪಕ್ಷದವರಾದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಈ ಹೇಳಿಕೆಯನ್ನು ಖಂಡಿಸಿದ್ದಾರೆ.

ಇಂತಹ ಹೇಳಿಕೆಯನ್ನು ನಾವೂ ಒಪ್ಪುವಂತದ್ದಲ್ಲ. ರಾಜಕೀಯದಲ್ಲಿ ಟೀಕೆಗಳು ಸಹಜ. ಆದ್ರೆ ಈ ರೀತಿಯಾಗಿ ಯಾವ ರಾಜಕಾರಣಿಯೂ ಮಾತನಾಡಬಾರದು. ಈ ರೀತಿಯ ನಡವಳಿಕೆಗಳು ರಾಜಕೀಯಕ್ಕೆ ಶೋಭೆ ತರುವಂತದ್ದಲ್ಲ. ಸಿದ್ಧಾಂತವನ್ನು ಟೀಕಿಸುವ ಮೂಲಕ ವ್ಯಕ್ತಿಯನ್ನು ಎದುರಿಸಬೇಕು. ಆದ್ರೆ ಹೀಗೆ ವೈಯಕ್ತಿಕವಾಗಿ ಈ ರೀತಿಯ ಮಾತುಗಳನ್ನು ಆಡಬಾರದು ಎಂದಿದ್ದಾರೆ.

ಇದೇ ವೇಳೆ ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡಿದ ಯತ್ನಾಳ್, ಟಿಪ್ಪುವನ್ನು ಆದರ್ಶ ಮಾಡಿಕೊಂಡವರ ಕಥೆಗಳನ್ನು ನಾವೂ ನೋಡಿದ್ದೇವೆ. ಟಿಪ್ಪು ಖಡ್ಗ ತಂದ ಮಲ್ಯ ವಿದೇಶಕ್ಕೆ ಓಡಿ ಹೋಗಿದ್ದಾನೆ. ಟಿಪ್ಪು ಸಿನಿಮಾ ತೆಗೆದವರೆಲ್ಲಾ ಏನಾದರೂ ಅಂತ ನೋಡಿದ್ದೇವೆ. ಹಿಂದೂಗಳ ಕಗ್ಗೋಲೆ ನಡೆಸಿದಂತ ಟಿಪ್ಪುವನ್ನು ಕಾಂಗ್ರೆಸ್ ಮೆಚ್ಚಿಕೊಂಡಿದೆ. ಅದು ಕೂಡ ಅಂತ್ಯ ಕಾಣಲಿದೆ. ಸಿದ್ದರಾಮಯ್ಯ ರಾಜಕೀಯ ಅಂತ್ಯಕ್ಕೆ ಟಿಪ್ಪು ಮೇಲಿನ ಒಲವೇ ಕಾರಣವಾಗುತ್ತೆ ಎಂದಿದ್ದಾರೆ.


