ಬಳ್ಳಾರಿ: ನುಡಿಹಬ್ಬದ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನ ಈ ಬಾರಿ ಬಾನು ಮುಷ್ತಾಕ್ ಅವರಿಗೆ ನೀಡಲಾಗಿದೆ. ಇತ್ತೀಚೆಗಷ್ಟೇಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದರು ಈ ಖ್ಯಾತ ಲೇಖಕಿ. ಇದೀಗ ಹೊಸ ಜವಾಬ್ದಾರಿಯನ್ನು ನೀಡಲಾಗಿದೆ. ಬಳ್ಳಾರಿಯಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಈ ಬಾರಿ ಬಾನು ಮುಷ್ತಾಕ್ ಆಯ್ಕೆಯಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ, ನಾಡೋಜ ಮಹೇಶ್ ಜೋಶಿ ನೇತ್ರತ್ವದಲ್ಲಿ ಇಂದು ಬಳ್ಳಾರಿಯಲ್ಲಿ ಕಸಾಪ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ಬಗ್ಗರ ಚರ್ಚೆ ಆಗಿದೆ. ಎಲ್ಲಾ ಪದಾಧಿಕಾರಿಗಳು ಸರ್ವಾನುಮತದಿಂದ ಬಾನು ಮುಷ್ತಾಕ್ ಅವರನ್ನೇ ಆಯ್ಕೆ ಮಾಡಿದ್ದಾರೆ. ಈ ಮೂಲಕ ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಕಾರ್ಯಕ್ರಮವನ್ನ ನಡೆಸಲಿದ್ದಾರೆ.
ಇತ್ತೀಚೆಗಷ್ಟೇ ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪುರಸ್ಕಾರ 2025ಕ್ಕೆ ಕನ್ನಡದ ಕತೆಗಾರ್ತಿ, ಸಾಹಿತಿ ಬಾನು ಮುಷ್ತಾಕ್ ಭಾಜನರಾಗಿದ್ದರು. ಬಾನು ಅವರು ಬರೆದ ಹಸೀನಾ ಮತ್ತು ಇತರ ಕತೆಗಳು, ಸಣ್ಣ ಕತೆಗಳ ಸಂಕಲನದ ಇಂಗ್ಲಿಷ್ ಅನುವಾದ ಹಾರ್ಟ್ ಲ್ಯಾಂಪ್ ಗೆ ಬೂಕರ್ ಪ್ರಶಸ್ತಿ ಸಿಕ್ಕಿತ್ತು. ಕನ್ನಡ ಸಾಹಿತ್ಯಾಸಕ್ತರಿಗೆ ಬಾನು ಮುಷ್ತಾಕ ಹೆಸರು ಚಿರಪರಿಚಿತ. ಇವರ ಕೃತಿಗಳು ಸಿನಿಮಾ ಕೂಡ ಆಗಿದೆ. ಇವರು ಮೂಲತಃ ಹಾಸನದವರು. ಹಾಸನದಲ್ಲಿಯೇ ಓದಿದ್ದು, ಬೆಳೆದಿದ್ದು. ವಕೀಲೆಯಾಗಿದ್ದ ಇವರು ಸಾಹಿತ್ಯ ಕ್ಷೇತ್ರಕ್ಕರ ಬಂದಿದ್ದು ಅಚ್ಚರಿಯೇ ಸರಿ. ಪ್ರಗತಿಪರ ಚಳುವಳಿಗಳಿಂದ ಪ್ರೇರಿತರಾದ ಇವರು ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಒಬ್ಬರು ಮುಸ್ಲಿಂ ಯುವತಿ ಸಿನಿಮಾ ನೋಡಿದ್ದಕ್ಕೆ ಆಕೆಯ ವಿರುದ್ಧ ಫತ್ವಾ ಹೊರಡಿಸಲಾಗಿತ್ತು. ಇದನ್ನು ಖಂಡಿಸಿದ್ದ ಮಾತ್ರವಲ್ಲದೇ ಲಂಕೇಶ್ ಪತ್ರಿಕೆಗೆ ಬರೆಯುವ ಮೂಲಕ ಪತ್ರಕರ್ತೆಯಾಗಿಯೂ ಮಾಧ್ಯಮ ಲೋಕಕ್ಕೆ ಪದಾರ್ಪಣೆ ಮಾಡಿದರು.






