ಮಂಗಳೂರು: ಕಳೆದ ಕೆಲ ತಿಂಗಳ ಹಿಂದೆ ಅನ್ಯಧರ್ಮೀಯರ ಬಹಿಷ್ಕಾರದ ವಿಚಾರ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು, ಸಾಕಷ್ಟು ಅವಾಂತರ ಕೂಡ ಆಗಿತ್ತು. ಜಾತ್ರೆ, ಹಬ್ಬ ಹರಿದಿನಗಳಲ್ಲಿ ಅನ್ಯ ಧರ್ಮೀಯರ ಅಂಗಡಿಗಳಿಗೆ ನಿಷೇಧ ಹೇರಲಾಗಿತ್ತು. ಅನ್ಯಧರ್ಮೀಯರ ಜೊತೆ ವ್ಯಾಪಾರ ವಹಿವಾಟು ಬೇಡ ಎನ್ನುವ ಅಭಿಯಾನ ಕೂಡ ಆರಂಭವಾಗಿತ್ತು. ನಂತರದಲ್ಲಿ ತಣ್ಣಗಾಗಿದ್ದ ವಿಚಾರ, ಈಗ ಮತ್ತೆ ಮುನ್ನೆಲೆಗೆ ಬಂದಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಾಜ್ಯದಿಂದ ಮಾತ್ರವಲ್ಲ ಬೇರೆ ರಾಜ್ಯದಿಂದಲೂ ಮೂಲೆ ಮೂಲೆಯಿಂದ ಜನ ಬರುತ್ತಾರೆ. ಹಲವು ರೀತಿಯ ಪೂಜೆಗಳನ್ನು ಮಾಡುತ್ತಾರೆ. ಮುಂದಿನ ದಿನಗಳಲ್ಲಿ ದೇವಸ್ಥಾನದಲ್ಲಿ ಚಂಪಾಷಷ್ಠಿಯ ಪೂಜೆ ಇರಲಿದೆ. ಈ ಪೂಜೆಯ ವೇಳೆ ಇಲ್ಲಿ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಅನ್ಯ ಧರ್ಮೀಯರ ವ್ಯಾಪಾರ ವಹಿವಾಟನ್ನು ನಿಷೇಧ ಮಾಡಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ದ್ವಾರಕ ಬಾಗಿಲಿನಲ್ಲಿಯೇ ಬ್ಯಾನರ್ ಹಾಕಲಾಗಿದೆ. ಕುಕ್ಕೆ ಸುಬ್ರಮಣ್ಯ ಚಂಪಾಷಷ್ಠಿಯ ಸಂದರ್ಭದಲ್ಲಿ ಈ ಪರಿಸರದಲ್ಲಿ ಅನ್ಯ ಮತಿಯ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಲಾಗಿದೆ ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ.