ಪಿಂಚಣಿ, ಬೆಳೆ ಪರಿಹಾರ ಹಣವನ್ನು ಬ್ಯಾಂಕ್‍ಗಳು ಸಾಲಕ್ಕೆ ಕಡಿತ ಮಾಡಿಕೊಳ್ಳುವಂತಿಲ್ಲ : ಸಚಿವ ಬಿ.ಸಿ.ಪಾಟೀಲ್ ಸೂಚನೆ

suddionenews
1 Min Read

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಮಾರ್ಚ್. 06) : ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಹಣ, ಬೆಳೆವಿಮೆ ಹಾಗೂ ಬೆಳೆನಷ್ಟ ಪರಿಹಾರ, ಕೃಷಿ ಸಮ್ಮಾನ್ ಸೇರಿದಂತೆ ವಿವಿಧ ಯೋಜನೆಯ ಮೊತ್ತವನ್ನು ಬ್ಯಾಂಕ್‍ಗಳು ಯಾವುದೇ ಕಾರಣಕ್ಕೂ ರೈತರ ಇತರೆ ಸಾಲಕ್ಕೆ ಜಮೆ ಮಾಡಿಕೊಳ್ಳಬಾರದು ಎಂದು ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆ ಪ್ರಾರಂಭಕ್ಕೂ ಮುನ್ನ, ಇತ್ತೀಚೆಗೆ ನಗರದಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಅಭೂತಪೂರ್ವ ಯಶಸ್ಸು ಕಂಡಿದ್ದು, ಇಡೀ ರಾಜ್ಯಕ್ಕೆ ಇಲ್ಲಿನ ಕಾರ್ಯಕ್ರಮ ಮಾದರಿಯಾಗಿದೆ.  ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲ ಅಧಿಕಾರಿಗಳು ಅಭಿನಂದನೆಗೆ ಅರ್ಹರು ಎಂದು ಸಚಿವರು ಪ್ರಶಂಸೆ ವ್ಯಕ್ತಪಡಿಸಿದರು.

ಜಿಲ್ಲೆಯ ಕೆಲವಡೆ ಸಾಮಾಜಿಕ ಭದ್ರತಾ ಯೋಜನೆಯ ವೃದ್ಧಾಪ್ಯ ವೇತನ, ವಿಧವಾ ವೇತನ ಮತ್ತಿತರ ಪಿಂಚಣಿ ಹಣವನ್ನು ಬ್ಯಾಂಕ್‍ಗಳು ಆಯಾ ಫಲಾನುಭವಿಗಳ ಹಳೆಯ ಸಾಲಕ್ಕೆ ಕಡಿತಗೊಳಿಸಿರುವುದು ಗಮನಕ್ಕೆ ಬಂದಿದೆ.  ಹಾಗಾಗಿ ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಹಣ ಸೇರಿದಂತೆ ರೈತರ ಪರಿಹಾರಧನದ ಮೊತ್ತವನ್ನು ಯಾವುದೇ ಕಾರಣಕ್ಕೂ ಸಾಲಕ್ಕೆ ಜಮೆ ಮಾಡಿಕೊಳ್ಳಬಾರದು.

ಅದೇ ರೀತಿ ಕೈಗಾರಿಕೆ ಇಲಾಖೆ ಹಾಗೂ ವಿವಿಧ ಇಲಾಖೆಗಳಿಂದ ನಾನಾ ಯೋಜನೆಗಳಡಿ ಸಾಲ ಮಂಜೂರಾಗಿರುವ ಫಲಾನುಭವಿಗಳಿಗೆ ಬ್ಯಾಂಕ್‍ಗಳು ಸಾಲ ನೀಡದೆ ಅಲೆದಾಡಿಸುತ್ತಿದ್ದಾರೆ.  ಕೂಡಲೆ ಸಂಬಂಧಪಟ್ಟ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ವಿತರಣೆಯಾಗಬೇಕು.  ಈ ಕುರಿತು ಬ್ಯಾಂಕ್‍ಗಳಿಗೆ ಸೂಕ್ತ ನಿರ್ದೇಶನ ನೀಡಿ, ಮೂರು ದಿನದೊಳಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸಚಿವರು ಸೂಚನೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *