ಸುದ್ದಿಒನ್, ಚಿತ್ರದುರ್ಗ, ನವೆಂಬರ್. 18 : ನಗರದಲ್ಲಿ ಇಬ್ಬರು ಬಾಂಗ್ಲಾ ನುಸುಳುಕೋರರು ಸಿಕ್ಕಿಬಿದ್ದಿದ್ದಾರೆ. ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರನ್ನು ಚಿತ್ರದುರ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿವೈಎಸ್ಪಿ ದಿನಕರ್ ನೇತೃತ್ವದಲ್ಲಿ ಗಾರ್ಮೆಂಟ್ಸ್ ಗಳ ಮೇಲೆ ದಾಳಿ ನಡೆದಿದ್ದು, ಬಾಂಗ್ಲಾ ವಾಸಿಗಳನ್ನ ವಶಕ್ಕರ ಪಡೆಯಲಾಗಿದೆ.
ಒಟ್ಟು 15 ಮಂದಿ ಬಾಂಗ್ಲಾ ನುಸುಳುಕೋರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಲ್ಲಿ ಶೇಕ್ ಶೈಪುರ್ ರೆಹಮಾನ್ ಹಾಗೂ ಸುಮನ್ ಹುಸೇನ್ ಎಂಬುವವರು ಬಾಂಗ್ಲಾದೇಶದಿಂದ ಭಾರತಕ್ಕೂ ಅಕ್ರಮವಾಗಿ ನುಸುಳಿರುವ ಮಾಹಿತಿ ಪಕ್ಕಾ ಆಗಿದೆ. ಬಹುತೇಕರ ಬಳಿ ಪಶ್ಚಿಮ ಬಂಗಾಳದ ಆಧಾರ್ ಕಾರ್ಡ್ ಪತ್ತೆಯಾಗಿದೆ. ಚಿತ್ರದುರ್ಗ ಡಿವೈಎಸ್ಪಿ ದಿನಕರ್, ಸಿಪಿಐ ಗುಡ್ಡಪ್ಪ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಕೋಟೆ ಪೊಲೀಸ್ ಠಾಣೆ, ಗ್ರಾಮಾಂತರ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಚಿತ್ರದುರ್ಗ ಎಸ್ಪಿ ರಂಜಿತ್ ಬಂಡಾರು ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.
ಕರ್ನಾಟಕದ ಪೊಲೀಸರು ಕಳೆದ ಹಲವು ತಿಂಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದು, ನಾಡಿನಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶ ಪ್ರಜೆಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲಸಿದ್ದ ನಾಲ್ವರು ಬಾಂಗ್ಲಾದೇಶ ಪ್ರಜೆಗಳನ್ನು ಇದೇ ವರ್ಷ ಎಪ್ರಿಲ್ನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇವರ ಬಳಿ ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ರೇಷನ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಮಜ್ದೂರ್ ಕಾರ್ಡ್, ವೋಟರ್ ಐಡಿ ಪತ್ತೆಯಾಗಿದ್ದವು. ಶಿವಮೊಗ್ಗದ ಜಯನಗರ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ಏಳು ಮಂದಿ ಬಾಂಗ್ಲಾದೇಶಿಗರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಏಳು ಜನರ ಬಳಿ ಮಂಗಳೂರು ವಿಳಾಸದ ಗುರುತಿನ ಚೀಟಿಗಳು ಪತ್ತೆಯಾಗಿದ್ದವು.