ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಭಾರೀ ತೀವ್ರತೆ ಪಡೆದುಕೊಂಡಿದೆ. ಸಾವುಗಳು ಹೆಚ್ಚಾಗಿವೆ, ರಷ್ಯಾ ತನ್ನ ದಾಳಿಯನ್ನ ಹೆಚ್ಚು ಮಾಡಿದೆ. ಈ ಮಧ್ಯೆ ಉಕ್ರೇನ್ ಗಾಗಿ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ತೆರಳಿರುವ ಕನ್ನಡಿಗರದ್ದೆ ಚಿಂತೆಯಾಗಿದೆ.
ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳನ್ನ ಭಾರತಕ್ಕೆ ವಾಪಾಸ್ ಕರೆತರಲಾಗಿದೆ. ಆದರೂ ಇನ್ನು ವಿದ್ಯಾರ್ಥಿಗಳು ಅಲ್ಲಿಯೇ ಸಿಲುಕಿದ್ದಾರೆ. ನಿನ್ನೆ ರಷ್ಯಾ ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಿತ್ತು. ಅದು ಅಲ್ಲಿರುವ ವಿದ್ಯಾರ್ಥಿಗಳನ್ನ ಸ್ಥಳಾಂತರ ಮಾಡಲು. ಆದ್ರೆ ಸಂಪೂರ್ಣವಾಗಿ ಸ್ಥಳಾಂತರ ಮಾಡಲು ಸಾಧ್ಯವಾಗಿಲ್ಲ.
ಅದರಲ್ಲೂ ಉಕ್ರೇನ್ ಸುಮಿಯಲ್ಲಿ ಕನ್ನಡಿಗರು ಸಿಲುಕಿದ್ದಾರೆ. ಬೆಂಗಳೂರಿನ ಬಸವನಗುಡಿಯ ನಿವಾಸಿಗಳು ಬರಲು ಆಗದೆ, ಜೀವಿಸಲು ಆಗದೆ ಪರದಾಡುತ್ತಿದ್ದಾರೆ. ಕುಡಿಯುವುದಕ್ಕೆ ನೀರು ಕೂಡ ಸಿಗುತ್ತಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ.
ತಿನ್ನುವುದಕ್ಕೆ ಅಕ್ಕಿ ಬಿಟ್ಟರೆ ನಮ್ಮ ಬಳಿ ಬೇರೆ ಏನು ಇಲ್ಲ, ನೀರು ಸಿಗುತ್ತಿದ್ದ ಕಟ್ಟಡದ ಮೇಲೆ ಬಾಂಬ್ ದಾಳಿಯಾಗಿದೆ. ದಾಳಿಯಿಂದಾಗಿ ಕುಡಿಯುವ ನೀರು ಕೆಂಪು ಮತ್ತು ಕಪ್ಪು ಬಣ್ಣಕ್ಕೆ ತಿರುಗಿದೆ. ನಿನ್ನೆ ಬೆಳಗ್ಗೆ 11 ಗಂಟೆಯವರೆಗೆ ಯುದ್ಧ ನಡೆಯುತ್ತಿತ್ತು ಎಂದು ಅಲ್ಲಿನ ವಿದ್ಯಾರ್ಥಿಗಳು ಗೋಳಾಡುತ್ತಿದ್ದಾರೆ.