ಅವೈಜ್ಞಾನಿಕ ಕಾಯಿದೆಗಳನ್ನು ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಕ್ರಷರ್ ಗಳು ಬಂದ್ : ಅಬ್ದುಲ್ ಮಜೀದ್

2 Min Read

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 12 : ಅವೈಜ್ಞಾನಿಕ ಕಾಯಿದೆಗಳನ್ನು ಹಿಂದಕ್ಕೆ ಪಡೆಯದಿದ್ದರೆ ಜ. 5 ರ ನಂತರ ಕ್ರಷರ್‍ಗಳನ್ನು ಬಂದ್ ಮಾಡಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದೆಂದು ಜಿಲ್ಲಾ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಮಜೀದ್ ರಾಜ್ಯ ಸರ್ಕಾರವನ್ನು ಎಚ್ಚರಿಸಿದರು.

ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾಲ್ಕೈದು ವರ್ಷಗಳಿಂದಲೂ ನಮ್ಮ ಬೇಡಿಕೆಗಳು ಈಡೇರದೆ ಇನ್ನು ನೆನೆಗುದ್ದಿಗೆ ಬಿದ್ದಿದೆ. ರಾಜ್ಯದಲ್ಲಿ ಬಿಜೆಪಿ.ಸರ್ಕಾರ ಅಧಿಕಾರದಲ್ಲಿದ್ದಾಗ ಒಂದೆರಡು ಬೇಡಿಕೆಗಳನ್ನು ಈಡೇರಿಸಿದ್ದನ್ನು ಬಿಟ್ಟರೆ ಪ್ರಮುಖ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಕಳೆದ ವರ್ಷ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಹೋರಾಟ ನಡೆಸಿದ್ದೆವು. ಐದು ಪಟ್ಟ ದಂಡ ವಿಧಿಸಿದೆಯಲ್ಲದೆ ಗುತ್ತಿಗೆದಾರರು ಮತ್ತು ಕ್ರಷರ್‍ಗಳಿಂದಲೂ ರಾಜಧನ ವಸೂಲು ಮಾಡುತ್ತಿದೆ. ಕ್ರಷರ್‍ಗಳನ್ನು ಬಂದ್ ಮಾಡಿ ಕಾರ್ಪೊರೇಟ್‍ಗಳಿಗೆ ವಹಿಸಲು ನಾವುಗಳು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಅವೈಜ್ಞಾನಿಕ ಕಾಯಿದೆಗಳನ್ನು ಜಾರಿಗೊಳಿಸಿರುವುದು ನಮಗೆ ಹೊರೆಯಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪರ್ಮಿಟ್ ತೆಗೆದುಕೊಂಡಿದ್ದೇವೆ. ಕ್ರಷರ್‍ಗೆ ನಾವುಗಳು ಕರೆಂಟ್ ಉಪಯೋಗಿಸುತ್ತಿಲ್ಲ. ಒಂದು ಕ್ರಷರ್ ಜಾಮ್ ಆದರೆ ಅದನ್ನು ತೆಗೆಯಲು ಒಂದೆರಡು ಗಂಟೆಗಳ ಸಮಯ ಬೇಕು. ಆಗ ಕರೆಂಟ್ ಬಳಕೆಯಾಗುತ್ತದೆ. ಒಂದು ಕ್ರಷರ್‍ನಿಂದ ಐದೂನೂರರಿಂದ ಆರು ನೂರು ಕುಟುಂಬಗಳು ಜೀವಿಸುತ್ತಿವೆ. ವಾಹನಗಳಿಗೆ ಜಿ.ಪಿ.ಎಸ್.ಅಳವಡಿಸಲಾಗಿದೆ. ವರ್ಷಕ್ಕೊಂದು ಬಾರಿ ನವೀಕರಣಕ್ಕೆ ಹತ್ತು ಸಾವಿರ ರೂ.ಗಳನ್ನು ಪಾವತಿಸಬೇಕು. ಚಾಮರಾಜನಗರದಲ್ಲಿ ಲಾರಿ ಮಾಲೀಕರೊಬ್ಬರಿಗೆ ಹದಿನೈದು ಲಕ್ಷ ರೂ.ಗಳ ದಂಡ ವಿಧಿಸಿದ್ದರಿಂದ ಹಾಡು ಹಗಲೆ ನೇಣಿಗೆ ಶರಣಗಾಗಿದ್ದಾರೆ. ಸರ್ಕಾರ ನಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾಗುತ್ತೇವೆ. ಒಂದು ಜಲ್ಲಿ ಕಲ್ಲು ಕೂಡ ಹೊರಗಿನಿಂದ ಬರಲು ಬಿಡುವುದಿಲ್ಲವೆಂದರು.

 

ಅಸೋಸಿಯೇಷನ್ ಪದಾಧಿಕಾರಿ ಕಾಂ.ಜಿ.ಸಿ.ಸುರೇಶ್‍ಬಾಬು ಮಾತನಾಡಿ ಕಲ್ಲು ಗಣಿಗಾರಿಕೆ ಮಾಡುವ ಪ್ರದೇಶಗಳಿಗೆ ಹೆಕ್ಟೇರ್‍ಗೆ ಐದು ಲಕ್ಷ ರೂ.ಗಳನ್ನು ನಿಗಧಿಪಡಿಸಬೇಕು. ಹೊಸ ಕಾನೂನುಗಳನ್ನು ರದ್ದುಪಡಿಸಿ ಹಳೆ ಕಾನೂನು ಜಾರಿಗೆ ತರಬೇಕು. ಟ್ರಾಕ್ಟರ್‍ಗಳಿಗೆ ಜಿ.ಪಿ.ಎಸ್.ಅಳವಡಿಸಿರುವುದನ್ನು ಸರ್ಕಾರ ಕೂಡಲೆ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು.

 

ಜಿಲ್ಲಾ ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಜಿ.ಬಿ.ಶೇಖರ್, ಉಪಾಧ್ಯಕ್ಷ ವೀರಭದ್ರಣ್ಣ, ಪದಾಧಿಕಾರಿಗಳಾದ ವೆಂಕಟೇಶ್, ಮಲ್ಲಿಕಾರ್ಜುನ್
ಅಭಿಷೇಕ್ ಇವರುಗಳು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *