ಹಿರಿಯೂರು : ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಗಾಯಿತ್ರಿ ಜಲಾಶಯ ಸೇರಿದಂತೆ ಎಲ್ಲಾ ಕೆರೆಗಳಿಗೆ ವಿವಿ ಸಾಗರದಿಂದ ನೀರು ಹರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಸೋಮವಾರ ಜವನಗೊಂಡನಹಳ್ಳಿ ಬಂದ್ ಗೆ ಕರೆ ನೀಡಿದ್ದು, ಭಾಗಶಃ ಬಂದ್ ಯಶಸ್ವಿಯಾಗಿದೆ. ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಮುಚ್ಚಿಕೊಂಡು ಬಂದ್ ಗೆ ಬೆಂಬಲ ಸೂಚಿಸಿದರು. ಪ್ರತಿಭಟನಾಕಾರರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.
ನಂತರ ಗಣೇಶ ದೇವಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮ ಕುರಿತು ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ಮಾತನಾಡಿ
ಭದ್ರಾ ಮೇಲ್ದಂಡೆ ಯೋಜನೆಯಿಂದ ವಾಣಿ ವಿಲಾಸ ಜಲಾಶಯಕ್ಕೆ ನೀರು ಹರಿಸುವ ಯೋಜನೆಯನ್ನು ಸುಲಭವಾಗಿ ಮಾಡಬಹುದಿತ್ತು. ಆದರೆ ಅಧಿಕಾರಿಗಳು ಹಾಗೂ ರಾಜಕಾರಣಿಗಳು ದುಡ್ಡು ಮಾಡುವ ನಿಟ್ಟಿನಲ್ಲಿ ಕಾಮಗಾರಿಯನ್ನು ದಿಕ್ಕು ತಪ್ಪಿಸಲಾಯಿತು. ಭದ್ರಾ ಮೇಲ್ದಂಡೆ ಕಾಮಗಾರಿಗೆ ಭೂ ಸ್ವಾಧೀನ ಪ್ರಕ್ರಿಯೆ ಸೇರಿದಂತೆ ವಿವಿಧ ಕಾರಣಗಳಿಂದ ಕಾಮಗಾರಿ
ವಿಳಂಬವಾಗುತ್ತಲೇ ಇದೆ ಎಂದು ಆರೋಪಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯಿಂದ ವಿವಿ ಸಾಗರ ಜಲಾಶಯಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ತಾಲೂಕಿನಲ್ಲಿ 543 ದಿನ ಹೋರಾಟ ಹಮ್ಮಿಕೊಳ್ಳಲಾಯಿತು. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುವ ವಿಷಯ ತಿಳಿದ ತಕ್ಷಣ ಆಗಿನ ನೀರಾವರಿ ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ ಅವರು ಸ್ಥಳಕ್ಕೆ ಬಂದು ಭದ್ರಾದಿಂದ ವಿವಿ ಸಾಗರ 5 ಟಿಎಂಸಿ ನೀರು ಹರಿಸಲು ಅಲೋಕೆಷನ್ ಮಾಡಿದ ಪರಿಣಾಮವಾಗಿ ಪ್ರತಿಭಟನೆ ಹಿಂಪಡೆಯಲಾಯಿತು. ನಮ್ಮ ತಾಲೂಕಿನಲ್ಲಿ ಡ್ಯಾಂ ಇದ್ದರೂ ಸಹ ತಾಲೂಕಿನ ಜನರಿಗೆ ನೀರು ಸಿಗದಿರುವುದು ದುರಂತ. ಗಾಯಿತ್ರಿ ಜಲಾಶಯ ಸೇರಿದಂತೆ ಸುಮಾರು 15 ಕೆರೆಗಳಿಗೆ ನೀರು ಹರಿಸಿದರೆ ಈ ಭಾಗದ ರೈತರ ಬದುಕಾದರೂ ಹಸನಾಗುತ್ತದೆ. ಬೇಸಿಗೆ ಬಂದರೆ ಸಾಕು ನೀರಿನ ಹಾಹಾಕಾರ ತಾಲೂಕಿನಲ್ಲಿ ಮೊದಲು ತಟ್ಟುವುದೇ ಈ ಹೋಬಳಿಗೆ. ಹಾಗಾಗಿ ಈ ಭಾಗದ ಕೆರೆಗಳಿಗೆ ವಿವಿ ಸಾಗರದ ನೀರು ಹರಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.
ಧರ್ಮಪುರ ಕೆರೆಗೆ ನೀರು ಹರಿಸುವಂತೆ ರೈತ ಸಂಘ ಹೋರಾಟ ನಡೆಸಿದ್ದರಿಂದ ಇದೀಗ ಆ ಭಾಗದಲ್ಲಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುತ್ತಿರುವುದರಿಂದ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಶಸ್ವಿಯಾಗಿದೆ. ಅದೇ ರೀತಿ ಜೆಜೆ ಹಳ್ಳಿ ಹೋಬಳಿಯಲ್ಲೂ ಬೇಡಿಕೆ ಈಡೇರಿಸುವವರೆಗೂ ರೈತ ನಿರಂತರ ಹೋರಾಟ ಮಾಡುತ್ತದೆ ಎಂದು ತಿಪ್ಪೇಸ್ವಾಮಿ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಸಿಬಿ ಪಾಪಣ್ಣ ಮಾತನಾಡಿ ಕಳೆದ ಆರು ತಿಂಗಳ ಹಿಂದೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಜಲಾಶಯದಿಂದ ಗಾಯಿತ್ರಿ ಜಲಾಶಯಕ್ಕೆ ನೀರು ಹರಿಸುವಂತೆ ಒತ್ತಾಯಿಸಲಾಗಿತ್ತು. 27 ಕಿಲೋಮೀಟರ್ ದೂರದಿಂದ 14 ಚೆಕ್ ಡ್ಯಾಂ ತುಂಬಿಕೊಂಡು ಗಾಯಿತ್ರಿ ಜಲಾಶಯಕ್ಕೆ ನೀರು ಹರಿಸಲಾಯಿತು. ಮೊಳಕಾಲ್ಮೂರು, ಚಳ್ಳಕೆರೆ, ಆಂಧ್ರಪ್ರದೇಶದವರೆಗೂ ವಿವಿ ಸಾಗರದ ನೀರು ಹರಿಸುತ್ತಾರೆ. ಆದರೆ ಇಲ್ಲಿನವರಿಗೆ ನೀರು ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಿದೆ.
ಮಾಜಿ ಸಂಸದ ಕೋದಂಡರಾಮಯ್ಯನವರು ನೀರಿನ ಹೋರಾಟಕ್ಕೆ ಧುಮುಕಿದ ಪರಿಣಾಮವಾಗಿ ಇಂದು ಭದ್ರಾ ಮೇಲ್ದಂಡೆ ಯೋಜನೆಯಿಂದ ವಿವಿ ಸಾಗರ ಡ್ಯಾಂಗೆ ನೀರು ಬರಲು ಸಾಧ್ಯವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ರವರಿಗೆ ಈ ಭಾಗಕ್ಕೆ ನೀರು ತರುವುದು ದೊಡ್ಡ ಸವಾಲು ಅಲ್ಲ. ಜವನಗೊಂಡನಹಳ್ಳಿ ಹೋಬಳಿಗೆ ನೀರು ಕೊಡಲಾಗುತ್ತದೆ ಎಂದು ಕಾಮಗಾರಿ ಮಾಡಲಾಗುತ್ತಿದೆ. ನೀರೇ ಇಲ್ಲದಿರುವುದರಿಂದ ಕಾಮಗಾರಿ ಯಾಕೆ ಆರಂಭಿಸಿದ್ದಾರೆ ಎಂದು ತಿಳಿಯುತ್ತಿಲ್ಲ. ಗಾಯಿತ್ರಿ ಜಲಾಶಯಕ್ಕೆ ಮೊದಲು ನೀರಿನ ಅಲೋಕೆಷನ್ ಮಾಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಸ್ಥಳಕ್ಕೆ ತಹಸೀಲ್ದಾರ್ ರಾಜೇಶ್ ಕುಮಾರ್ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿ ಸರ್ಕಾರಕ್ಕೆ ನಿಮ್ಮ ಬೇಡಿಕೆಯನ್ನು ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.