ಚಿತ್ರದುರ್ಗ,(ನ.21): ಜಿಲ್ಲೆಯ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ 2022ರ ನವೆಂಬರ್ 16 ರಿಂದ 30 ರವರೆಗೆ ಸಿ.ಆರ್.ಪಿ.ಸಿ ಕಾಯ್ದೆ 1973ರ ಕಲಂ 144 ಮೇರೆಗೆ ಹಾಗೂ karnataka Animal Diseases (Control) Act 1961 1961 ರ ಕಲಂ 20 ರಡಿಯಲ್ಲಿ ಪ್ರದತ್ತವಾದ ಅಧಿಕಾರದನ್ವಯ ಚಿತ್ರದುರ್ಗ ಜಿಲ್ಲೆಯಾದ್ಯಂತ ನಡೆಸಲಾಗುವ ಜಾನುವಾರು ಸಂತೆ, ಜಾನುವಾರು ಜಾತ್ರೆ ಮತ್ತು ಜಾನುವಾರು ಸಾಗಾಣಿಕೆ ಮಾಡುವುದುನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ ಆದೇಶಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ 585 ಗ್ರಾಮಗಳಲ್ಲಿ ಒಟ್ಟು 7405 ದನ, ಎಮ್ಮೆಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ರೋಗದಿಂದ ಜಿಲ್ಲೆಯಲ್ಲಿ ಈವರೆಗೆ 681 ಜಾನುವಾರುಗಳು ಮೃತಪಟ್ಟಿದ್ದು, ರೋಗವು ವ್ಯಾಪಕವಾಗಿ ಹರಡುತ್ತಿರುವುದರಿಂದ ರೋಗದ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮವಾಗಿ 2,00,000-00 ಡೋಸ್ ಲಸಿಕೆಯನ್ನು ಹಾಕಬೇಕಿದ್ದು, ಈಗಾಗಲೇ 1,61,118 ಡೋಸ್ ಲಸಿಕೆಯನ್ನು ಹಾಕಲಾಗಿರುತ್ತದೆ. 3113 ಜಾನುವಾರುಗಳು ರೋಗದಿಂದ ಚೇತರಿಸಿಕೊಂಡಿರುತ್ತವೆಂದು ತಿಳಿಸಿ, ರೋಗವು ನಿಯಂತ್ರಣವಾಗದೇ ವ್ಯಾಪಕವಾಗಿ ಹರಡುತ್ತಿರುವ ಕಾರಣ ಈ ರೋಗದ ಹರಡುವಿಕೆಯನ್ನು ತಡೆಗಟ್ಟಲು ನವೆಂಬರ್ 30ರವರೆಗೆ ಜಿಲ್ಲೆಯಾದ್ಯಂತ ಜಾನುವಾರು ಸಂತೆ, ಜಾತ್ರೆ ಮತ್ತು ಜಾನುವಾರು ಸಾಗಾಣಿಕೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ ತಿಳಿಸಿದ್ದಾರೆ.